ದಾವಣಗೆರೆ: ವಾರ್ಡ್ಗಳಲ್ಲಿನ ರಸ್ತೆ ಕಾಮಗಾರಿಯಲ್ಲಿ ಲೋಪ ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ.
ಕೆಎಸ್ಆರ್ಟಿಸಿ ಸಮುದಾಯ ಭವನದ ಮುಂದೆ ಸ್ಮಾರ್ಟ್ ಸಿಟಿ ವತಿಯಿಂದ ಆಯೋಜಿಸಲಾಗಿದ್ದ, ರಸ್ತೆ ಅಭಿವೃದ್ಧಿ ಕಾಮಗಾರಿ (ಹೊಸ ಗಡಿಯಾರ ವೃತ್ತದಿಂದ ಸಪ್ತಗಿರಿ ಶಾಲೆಯವರೆಗೆ ರೂ. 10 ಕೋಟಿ ವೆಚ್ಚದ ರಸ್ತೆ) ಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಾಲಿಕೆಯ ಪ್ರತಿಯೊಬ್ಬ ವಾರ್ಡ್ ಸದಸ್ಯರು ನಿಮ್ಮ ವಾರ್ಡ್ಗಳಲ್ಲಿ ಯಾವುದೇ ಕಾಮಗಾರಿ ವಿಳಂಬವಾದರೆ ನಮ್ಮ ಗಮನಕ್ಕೆ ತರಬೇಕು. ನಿಮ್ಮ ವಾರ್ಡ್ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಜೊತೆಗೆ ತಮ್ಮ ವಾರ್ಡ್ಗಳಲ್ಲಿರುವ ಪೌರ ಕಾರ್ಮಿಕರ ಸಮಸ್ಯೆ, ಕುಡಿಯುವ ನೀರು ಹಾಗೂ ಕಸದ ವಿಲೇವಾರಿ ಸಮಸ್ಯೆಗಳ ಕುರಿತು ಶಾಸಕರು ಹಾಗೂ ಸಂಸದರ ಗಮನಕ್ಕೆ ತರುವ ಮೂಲಕ ಪಕ್ಷಭೇದ ಮರೆತು ನಮ್ಮ ಜೊತೆ ಕೈ ಜೋಡಿಸಬೇಕು ಎಂದರು.
ಪಾಲಿಕೆ ಮೇಯರ್ ಬಿ.ಜೆ. ಅಜಯ್ ಕುಮಾರ್ ಮಾತನಾಡಿ, 4 ವರ್ಷದ ಹಿಂದೆ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಿ ದಾವಣಗೆರೆ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಶ್ರಮಿಸಿದ ಶ್ರೇಯ ಜಿ.ಎಂ. ಸಿದ್ದೇಶ್ವರ ಅವರಿಗೆ ಸಲ್ಲುತ್ತದೆ ಎಂದರು. ಲಾಕ್‍ಡೌನ್ ವೇಳೆ ಯಾವುದೇ ಕಾಮಗಾರಿಯನ್ನು ಹಮ್ಮಿಕೊಂಡಿರಲಿಲ್ಲ. ಇದೀಗ ರೂ. 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಸಿಮೆಂಟ್ ರಸ್ತೆಯು ಸುಮಾರು 40 ವರ್ಷಗಳವರೆಗೂ ಬಾಳಿಕೆ ಬರುವಂತೆ ಸರಿಯಾಗಿ ಕೆಲಸ ನಿರ್ವಹಿಸಬೇಕು. ಉತ್ತಮ ಗುಣಮಟ್ಟದ ಮರಳು, ಜಲ್ಲಿಕಲ್ಲು ಹಾಕಬೇಕು. ಜೊತೆಗೆ ನೀರಿನ ಕ್ಯೂರಿಂಗ್ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಸದಸ್ಯೆ ಶಿಲ್ಪಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ಸದಸ್ಯರಾದ ಜಯಮ್ಮ ಗೋಪಿನಾಯ್ಕ್, ಪ್ರಸನ್ನ ಕುಮಾರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.