ICC Test Rankings: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಪಟ್ಟಕ್ಕೇರಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಪಡೆದ ಇವರು ಮತ್ತೊಮ್ಮೆ ಜಗತ್ತಿನ ನಂಬರ್ 1 ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಬ್ಯಾಟಿಂಗ್ ರ‍್ಯಾಂಕಿಂಗ್- ಯಶಸ್ವಿ ಜೈಸ್ವಾಲ್‌ಗೆ 2ನೇ ಸ್ಥಾನ: ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್‌ಗಳ ಸ್ಮರಣೀಯ ಪ್ರದರ್ಶನ ನೀಡಿದ್ದರು. ಇದರ ಫಲವಾಗಿ, ಐಸಿಸಿ ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ತಲುಪಿದ್ದಾರೆ. ಮೊದಲನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಇದ್ದಾರೆ.
ಪರ್ತ್ ಟೆಸ್ಟ್ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಇದು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಕೈ ಹಿಡಿದು ಮೇಲಕ್ಕೆತ್ತಿದೆ. ವಿರಾಟ್ ಕೊಹ್ಲಿ 9 ಸ್ಥಾನ ಮೇಲೇರಿದ್ದು, 13ನೇ ಸ್ಥಾನಕ್ಕೆ ತಲುಪಿದ್ದಾರೆ. ಕೆ.ಎಲ್.ರಾಹುಲ್ ಇದೇ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಲಾಭವನ್ನು ರ‍್ಯಾಂಕಿಂಗ್‌ನಲ್ಲಿ ಗಿಟ್ಟಿಸಿಕೊಂಡಿದ್ದಾರೆ. ರಾಹುಲ್ 13 ಸ್ಥಾನ ಜಿಗಿದು 49ನೇ ಸ್ಥಾನದಲ್ಲಿದ್ದಾರೆ.
ರಿಷಭ್ ಪಂತ್ ಆರನೇ ಸ್ಥಾನದಲ್ಲಿದ್ದಾರೆ. ಮೊದಲ ಟೆಸ್ಟ್ ಆಡಲು ಸಾಧ್ಯವಾಗದ ಶುಭಮನ್ ಗಿಲ್ ಒಂದು ಸ್ಥಾನ ಕೆಳಗಿಳಿದಿದ್ದಾರೆ. ಗಿಲ್ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯ ಆಡಲು ಸಾಧ್ಯವಾಗದಿದ್ದರೂ ಅವರ ರ‍್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರೋಹಿತ್ 26ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
🔹 Jasprit Bumrah reclaims throne
— ICC (@ICC) November 27, 2024
🔹 Yashasvi Jaiswal, Virat Kohli rise
🔹 Mehidy Hasan makes his mark
Big changes in the ICC Men's Test Player Rankings after the #AUSvIND and #WIvBAN matches 👉 https://t.co/6Rs2GY3snX pic.twitter.com/9TXa2JhcEg
ಬೌಲರ್‌ಗಳ ಟೆಸ್ಟ್ ರ‍್ಯಾಂಕಿಂಗ್: ಬುಮ್ರಾ ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಎರಡನೇ ಸ್ಥಾನಕ್ಕೆ ಕುಸಿದರೆ, ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಪರ್ತ್ ಟೆಸ್ಟ್‌ನಲ್ಲಿ ಅಶ್ವಿನ್ ಆಡದಿದ್ದರೂ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ರವೀಂದ್ರ ಜಡೇಜಾ ಒಂದು ಸ್ಥಾನ ಕುಸಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಒಟ್ಟು ಐದು ವಿಕೆಟ್ ಉರುಳಿಸಿರುವ ಮೊಹಮ್ಮದ್ ಸಿರಾಜ್ ಮೂರು ಸ್ಥಾನ ಮೇಲೇರಿ 25ನೇ ಸ್ಥಾನದಲ್ಲಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲುಕಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆದರೂ ಆತಿಥೇಯರನ್ನು 295 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 1-0ರಿಂದ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಲಕ್ ಅಂದ್ರೆ ಇದು ನೋಡಿ! ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ಯುವ ಕ್ರಿಕೆಟಿಗರು ಇವರು