ದಾವಣಗೆರೆ: ಅದು ದಲಿತ ಸಮುದಾಯಕ್ಕೆ ಸೇರಿದ ವಸತಿ ನಿಲಯ. ಅಲ್ಲಿ ಮಕ್ಕಳು ಇಲ್ಲದಿದ್ದರೂ ಮಕ್ಕಳಿದ್ದಾರೆ ಎಂಬಂತೆ ಫೋಟೊ ತೆಗೆಸಿ ದಾಖಲೆ ಸೃಷ್ಟಿಸಿ ಹಣ ಲಪಟಾಯಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಧ್ವನಿ ಎತ್ತಿರುವ ಇಡೀ ಕುಟುಂಬಕ್ಕೆ ಊರಿನಿಂದಲೇ ಬಹಿಷ್ಕಾರ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಜಗಳೂರು ಪಟ್ಟಣದ ಬಸವರಾಜ್ ಹಾಗು ರೇಖಾ ದಂಪತಿ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಕೆಲವರು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಜಗಳೂರು ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದ ಆವರಣದಲ್ಲಿರುವ ಆದಿಜಾಂಬವ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳೇ ಇಲ್ಲದಿದ್ದರೂ 42 ವಿದ್ಯಾರ್ಥಿಗಳು ವಸತಿನಿಲಯದಲ್ಲಿ ಇದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಮಾಸಿಕವಾಗಿ ಬರುತ್ತಿದ್ದ 27 ಸಾವಿರ ಹಣವನ್ನು ಆದಿ ಜಾಂಬವ ಹರಿಜನ ಸಂಘ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದ ಹಟ್ಟಿಪಾಪಣ್ಣ, ಚಂದ್ರಪ್ಪ, ಹನುಮಂತಪ್ಪ ತಿಪ್ಪೇಸ್ವಾಮಿ, ಶಂಭುಲಿಂಗಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿ ಜಗಳೂರಿನಿಂದ ಇವರ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರಂತೆ. ಮತ್ತೆ ಜಗಳೂರಿಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆಂದು ಆರೋಪಿಸಲಾಗಿದೆ.
ಬಸವರಾಜ್ ಹಾಗು ರೇಖಾ ದಂಪತಿಗೆ ಮೂರು ಮಕ್ಕಳಿದ್ದಾರೆ. ಬಹಿಷ್ಕಾರಕ್ಕೆ ಒಳಗಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿ ಗಾರ್ಮೆಂಟ್ಸ್ನಲ್ಲಿ ಪತ್ನಿ ಕೆಲಸ ಮಾಡುತ್ತಿದ್ದಾರೆ. ಬಸವರಾಜ್ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರಂತೆ. ಅಲ್ಲದೆ, ಮಕ್ಕಳ ವಿದ್ಯಾಭ್ಯಾಸ ಕೂಡ ಮೊಟಾಕಾಗಿದೆ. ಬಸವರಾಜ್ ಮೊದಲ ಮಗಳು ಲಕ್ಷ್ಮೀ, ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಿತ್ತು. ಆದರೆ, ಜಗಳೂರಿಗೆ ಹೋದರೆ ಎಲ್ಲಿ ಹಲ್ಲೆ ನಡೆಸುತ್ತಾರೋ, ಕೊಲೆ ಮಾಡುತ್ತಾರೋ ಎನ್ನುವ ಭಯದಿಂದ ಪರೀಕ್ಷೆಗೆ ಹಾಜರಾಗಿಲ್ಲ ಎನ್ನುತ್ತಾರೆ ಪೋಷಕರು.
ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಂದಿದ್ದು ಹುಸಿ ಬಾಂಬ್ ಬೆದರಿಕೆ: ಪೋಷಕರ ನಿಟ್ಟುಸಿರು