ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಅಗ್ನಿ ಅವಘಡಗಳ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದ್ದು, ಸಂಭವಿಸಿದ ಘಟನೆಯಲ್ಲಿ ಹುಲ್ಲಿನ ಮೆದೆಗಳೇ ಹೆಚ್ಚು ಬೆಂಕಿಗಾಹುತಿಯಾಗಿವೆ.
ಕೆಲವು ಅಜಾಗರೂಕತೆಯಿಂದ ಬೆಂಕಿ ಅಪಘಾತಗಳು ಸಂಭವಿಸುತ್ತಿದ್ದು, ಅದನ್ನು ತಪ್ಪಿಸಲು ಅಗ್ನಿ ಶಾಮಕ ದಳದ ಅಧಿಕಾರಿಗಳು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಹುಲ್ಲಿನ ಬಣವೆಗಳಿಗೆ ಬೆಂಕಿ ಬಿದ್ದಿರುವ ಪ್ರಕರಣಗಳು ಹೆಚ್ಚು ವರದಿಯಾಗಿದೆ. ವಾಣಿಜ್ಯ ಸಂಕೀರ್ಣ, ಕೈಗಾರಿಕೆಗಳು ಹಾಗೂ ಅಡುಗೆ ಅನಿಲ ಸ್ಫೋಟ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗಿದೆ.
2019ಕ್ಕೆ ಹೋಲಿಸಿದರೆ 2020ರಲ್ಲಿ ಬೆಂಕಿ ಅಪಘಾತ ಪ್ರಕರಣಗಳ ಪ್ರಮಾಣ ಕೊಂಚ ಇಳಿಮುಖವಾಗಿವೆ. ಕಳೆದ 2020ರಲ್ಲಿ ಒಟ್ಟು 546 ಅಗ್ನಿ ಪ್ರಕರಣಗಳು ಸಂಭವಿಸಿದ್ದು, ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಹುಲ್ಲಿನ ಬಣವೆಗಳು ಅಗ್ನಿ ಆಕಸ್ಮಿಕಕ್ಕೆ ತುತ್ತಾಗಿವೆ. ವಾಣಿಜ್ಯ ಹಾಗು ಕೈಗಾರಿಕೆ, ಅಡುಗೆ ಅನಿಲ ಸ್ಫೋಟ ಸಂಬಂಧಿತ ಬೆಂಕಿ ಅಪಘಾತ ಪ್ರಕರಣಗಳು ಹೆಚ್ಚಾಗಿ ಸಂಭವಿಸಿಲ್ಲ. ಈ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಶಾಲಾ-ಕಾಲೇಜು, ಮನೆಗಳಿಗೆ ತೆರಳಿ ವಿದ್ಯಾರ್ಥಿಗಳಿಲ್ಲಿ ಹಾಗೂ ಗೃಹಿಣಿಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದ ರಸ್ತೆ ತುಂಬೆಲ್ಲಾ ಗುಂಡಿಗಳು, ಬೇಸತ್ತ ವಾಹನ ಸವಾರರು!
ದಾವಣಗೆರೆ ನಗರದಲ್ಲಿ 1 ಪೇಂಟ್ ಅಂಗಡಿ, ಡಿಸ್ಲೇರಿ ಕಾರ್ಖಾನೆ, 4 ಅಡುಗೆ ಅನಿಲ ಸ್ಫೋಟ ಪ್ರಕರಣಗಳು ಬಿಟ್ಟರೆ ಉಳಿದೆಲ್ಲವೂ ಹುಲ್ಲಿನ ಬಣವೆಗಳಿಗೆ ಬೆಂಕಿ ಬಿದ್ದ ಪ್ರಕರಣಗಳಾಗಿವೆ. ಕಳೆದ ವರ್ಷ ಕೊರೊನಾ ಹಾವಳಿ, ಲಾಕ್ಡೌನ್ ಇದ್ದಿದ್ದರಿಂದ ಜಿಲ್ಲೆಯಲ್ಲಿ ಬೆಂಕಿ ಅವಘಡಗಳ ಪ್ರಮಾಣ ಕೊಂಚ ಕಡಿಮೆಯಾಗಿವೆ ಎನ್ನುತ್ತಾರೆ ಅಧಿಕಾರಿಗಳು.