ದಾವಣಗೆರೆ: ಪ್ರತಿಪಕ್ಷಗಳ ಕುಮ್ಮಕ್ಕಿನಿಂದ ದೆಹಲಿಯಲ್ಲಿ ಹೋರಾಟ ನಡೆಯುತ್ತಿದ್ದು, ಮುಗ್ಧ ರೈತರ ಶೋಷಣೆಯಾಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಧಾನಿ ಮೋದಿ ಕಾಯ್ದೆಗೆ ತಿದ್ದುಪಡಿ ತಂದರು. ಇದಕ್ಕೆ ರೈತರು 2 ವರ್ಷ ಅವಕಾಶ ಕೊಟ್ಟು ನೋಡಲಿ. ರೈತ ವಿರೋಧಿ ಆಗಿದ್ದರೆ ಅದನ್ನು ಹಿಂಪಡೆಯಬಹುದೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.
ಬಜೆಟ್ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೊರೊನಾ ಹಿನ್ನೆಲೆ ರಾಜ್ಯ, ಕೇಂದ್ರ ಸರ್ಕಾರದ ಆದಾಯಕ್ಕೆ ಖೋತಾ ಆಗಿದ್ದು, ನಿರೀಕ್ಷಿತ ಪ್ರಮಾಣದ ಆರ್ಥಿಕ ಪ್ರಗತಿ ಸಾಧ್ಯವಾಗಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಸಿಎಂ ಬಜೆಟ್ ಮಂಡಿಸಲಿದ್ದು, ಇದ್ದಂತಹ ವ್ಯವಸ್ಥೆಯಲ್ಲಿ ಸರಿದೂಗಿಸುವ ಪ್ರಯತ್ನವನ್ನು ಸಿಎಂ ಮಾಡುತ್ತಿದ್ದಾರೆ. ಬಜೆಟ್ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕೇವಲ ಟೀಕೆಗಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು.
ಓದಿ:ಕೆಂಪುಕೋಟೆ ಮೇಲೆ ಅನ್ಯ ಧ್ವಜ ಹಾರಾಟದಲ್ಲಿ ವಿದೇಶಿ ಶಕ್ತಿಗಳ ಕೈವಾಡ: ಯತ್ನಾಳ್ ಶಂಕೆ
ಬೆಳಗಾವಿ ಉಪಚುನಾವಣೆ ಶ್ರದ್ಧಾ ಶೆಟ್ಟರಿಗೆ ಟಿಕೆಟ್:
ಬೆಳಗಾಗಿ ಸಂಸದರ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿಲ್ಲ. ಉಪಚುನಾವಣೆ ಘೋಷಣೆಯಾದ ಮೇಲೆ ಸ್ಥಳೀಯ ನಾಯಕರು, ಹೈಕಮಾಂಡ್ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಚಿವ ಸಂಪುಟ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಸಚಿವ ಸಂಪುಟ ವಿಸ್ತರಣೆಯಾದಾಗ ಇವೆಲ್ಲಾ ಸಹಜ. ಅವರು ಅಭಿಪ್ರಾಯ ತಿಳಿಸಿದ್ದು, ಮುಂದೆ ಎಲ್ಲವೂ ಸರಿಹೋಗುತ್ತದೆ ಎಂದರು.