ದಾವಣಗೆರೆ: ಜಿಲ್ಲೆಯಲ್ಲಿ ಈವರೆಗೆ ಕೊರೊನಾ ವೈರಸ್ ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ವಿವಿಧ ಇಲಾಖೆಗಳು ತಮಗೆ ನಿರ್ವಹಿಸಿದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ಟಿವಿ, ಪತ್ರಿಕೆ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ಕುರಿತಾಗಿ ಭೀತಿ ಹುಟ್ಟಿಸುವ ಸುಳ್ಳು ಸುದ್ದಿ ಹರಡುವಲ್ಲಿ ಭಾಗಿಯಾಗುವುದು ಶಿಕ್ಷಾರ್ಹ ಅಪರಾಧ. ಇಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಮ್ಮು, ಶೀತದಂತಹ ಫ್ಲೂ ಲಕ್ಷಣಗಳನ್ನು ಪರೀಕ್ಷಿಸಲು ಪ್ರತ್ಯೇಕ ಫ್ಲ್ಯೂ ಕಾರ್ನರ್ ವ್ಯವಸ್ಥೆ ಮಾಡಬೇಕು. ಎಲ್ಲಾ ಆಸ್ಪತ್ರೆಗಳು ಪ್ರವಾಸಿ ವರದಿಯನ್ನು ನಿರ್ವಹಿಸಬೇಕು. ಯಾವುದಾದರೂ ರೋಗಿ ವಿದೇಶ ಅಥವಾ ಹೊರ ರಾಜ್ಯಗಳಿಗೆ ಪ್ರವಾಸ ಮಾಡಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಂದು ಪಕ್ಷ ಕೊರೊನಾ ಪೀಡಿತ ದೇಶಗಳಿಗೆ ಹೋಗಿ ಬಂದಿದ್ದರೆ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ 28 ದಿನ ಇಟ್ಟು ನಿಗಾ ವಹಿಸಬೇಕು ಎಂದರು.
ನಗರದ ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ವೈರಸ್ ಸೋಂಕಿನ ಬಗ್ಗೆ ಮಾಹಿತಿ ಮತ್ತು ಸಹಾಯ ಒದಗಿಸಲು ತಲಾ ಒಂದು ಹೆಲ್ಪ್ ಡೆಸ್ಕ್ ತೆರೆಯಬೇಕು. ನಗರ ಪಾಲಿಕೆ, ಪಟ್ಟಣ ಪಂಚಾಯತ್, ಪುರ ಪಂಚಾಯತ್‌ಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಾರದ ಸಂತೆ, ಜಾತ್ರೆಗಳಲ್ಲಿ ಸ್ಥಳೀಯ ಸಂಸ್ಥೆಗಳ ವತಿಯಿಂದ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳು ಹಾಗೂ ಇತರ ಮೂಲಕ ಅರಿವು ಮೂಡಿಸಬೇಕು. ಆದರೆ, ಅರಿವು ಮೂಡಿಸುವ ಭರದಲ್ಲಿ ಜನರಲ್ಲಿ ಅನಗತ್ಯ ಭಯ ಸೃಷ್ಟಿಸಬಾರದು ಎಂದರು.
ಖಾಸಗಿ ಅಥವಾ ಯಾವುದೇ ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸಿ ಬರುವಂತೆ ಹಾಗೂ ಸ್ಯಾನಿಟೈಸರ್ಗಳನ್ನು ತರುವಂತೆ ಒತ್ತಾಯಿಸಬಾರದು. ಶೀತ ಮತ್ತು ಕೆಮ್ಮಿನಂತಹ ಲಕ್ಷಣಗಳು ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ. ಈ ಕುರಿತು ಡಿಡಿಪಿಐ ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸವಂತಪ್ಪ ಹೇಳಿದರು. ಡಿಹೆಚ್ಒ ಡಾ. ರಾಘವೇಂದ್ರ ಸ್ವಾಮಿ ಮಾತನಾಡಿ, ಇತ್ತೀಚೆಗೆ ದುಬೈನಿಂದ ದಾವಣಗೆರೆಗೆ ಬಂದ ಕುಟುಂಬದ ನಾಲ್ಕು ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ವರದಿ ಇನ್ನೂ ಬಂದಿಲ್ಲ. ಇನ್ಮುಂದೆ ಸ್ಯಾಂಪಲ್‍ಗಳನ್ನು ಬೆಂಗಳೂರಿಗೆ ಬದಲಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗುವುದು ಎಂದರು.
ಯಾವುದೇ ವ್ಯಕ್ತಿ ಕೊರೊನಾ ಸೋಂಕು ಪೀಡಿತ ದೇಶಗಳಿಗೆ ಹೋಗಿ ನಮ್ಮ ದೇಶಕ್ಕೆ ಬಂದು, ಆಕಸ್ಮಾತ್ ವಿಮಾನ ನಿಲ್ದಾಣದಲ್ಲೂ ಸ್ಕ್ರೀನೀಂಗ್‍ನಲ್ಲಿ ತಪ್ಪಿ ಹೋಗಿದ್ದರೆ, ತಾವೇ ಜಿಲ್ಲಾಸ್ಪತ್ರೆಗೆ ಬಂದು ಸ್ವಯಂ ವರದಿ ಮಾಡಿಕೊಂಡು ಪರೀಕ್ಷೆಗೆ ಒಳಗಾಗಬೇಕು. ಹಾಗೂ ಈ ಕುರಿತು ಹೆಲ್ಪ್ ಲೈನ್ ಟೋಲ್‍ಫ್ರೀ ಸಂಖ್ಯೆ 104ಕ್ಕೆ ಕರೆ ಮಾಡಬಹುದು ಎಂದರು.