ದಾವಣಗೆರೆ: ಕೊರೊನಾ ವೈರಸ್ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಜಗಳೂರು ಪಟ್ಟಣದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಮರೆಯಲಾಗದ ಕ್ಷಣ ಎಂದರೆ ಕೊರೊನಾ ವಿರುದ್ಧದ ಹೋರಾಟ. ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಎಲ್ಲರ ಸೇವೆಯಲ್ಲಿ ಇದೊಂದು ಅವಿಸ್ಮರಣೀಯ. ಎರಡೂವರೆ ತಿಂಗಳ ಮಗುವಿನಿಂದ ಹಿಡಿದು 70 ವರ್ಷದ ವೃದ್ಧರೂ ಗುಣಮುಖರಾಗಿದ್ದಾರೆ. ಜಾಲಿನಗರದಲ್ಲಿ 107 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದು ಖುಷಿಯ ಸಂಗತಿ ಎಂದರು.
ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಯಾವ ಖಾಸಗಿ ಆಸ್ಪತ್ರೆ ವೈದ್ಯರಿಗಿಂತ ಸರ್ಕಾರಿ ವೈದ್ಯರು ಕಡಿಮೆ ಏನಲ್ಲ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ, ಗುಣಮುಖರನ್ನಾಗಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದ ಕೋವಿಡ್ -19 ಪ್ರಯೋಗಾಲಯ ತೆರೆಯಲಾಗಿದೆ. ಸಂಕಷ್ಟದ ಸಮಯದಲ್ಲಿ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದರು.