ದಾವಣಗೆರೆ: ಎರಡನೇ ಪತ್ನಿಯ ಎರಡು ವರ್ಷದ ಮಗುವನ್ನು ಕೊಲೆ ಮಾಡಿ ತಂದೆಯೇ ಹೂತು ಹಾಕಿರುವ ಅಮಾನವೀಯ ಘಟನೆ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಡೆದಿದೆ.
ಶಿರೀಷಾ ಹತ್ಯೆಯಾದ ಮಗು. ಗುತ್ತಿದುರ್ಗ ಗ್ರಾಮದ ನಿಂಗಪ್ಪ ಕೊಲೆ ಮಾಡಿದ ಆರೋಪಿ. ಮಗು ಹತ್ಯೆ ಹಾಗೂ ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.ನಿಂಗಪ್ಪ ಹಾಗೂ ಮೊದಲನೇ ಪತ್ನಿಗೆ ಮೂವರು ಮಕ್ಕಳಿದ್ದಾರೆ. ನರ್ಸ್ ಆಗಿದ್ದ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಈತ ಮೊದಲ ಪತ್ನಿ ಹಾಗೂ ಸಂಬಂಧಿಕರಿಗೆ ಗೊತ್ತಾಗದಂತೆ ಆಕೆಯನ್ನ ಮದುವೆಯಾಗಿದ್ದ. ಎರಡನೇ ಮದುವೆ ಬಗ್ಗೆ ಅನುಮಾನ ಹೊಂದಿದ್ದ ಮೊದಲ ಪತ್ನಿಯು ನಿಂಗಪ್ಪನಿಗೆ ವಿಚಾರಿಸುತ್ತಿದ್ದರೂ ಬಾಯಿ ಬಿಟ್ಟಿರಲಿಲ್ಲವಂತೆ. ಪತ್ನಿ ಪ್ರಶ್ನೆ ಮಾಡುತ್ತಿದ್ದರಿಂದ ಎಲ್ಲಿ ಸಿಕ್ಕಿ ಬೀಳುತ್ತೇನೋ ಎಂಬ ಭಯದಿಂದ ಸೆಪ್ಟೆಂಬರ್ ಮೊದಲ ವಾರದಲ್ಲಿ ಒಂದು ದಿನ ಮಗು ಶಿರೀಷಾಳನ್ನು ಚಿತ್ರದುರ್ಗದಿಂದ ಅಪಹರಿಸಿ ಗುತ್ತಿದುರ್ಗಕ್ಕೆ ಕರೆ ತಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆಯೇ ನಿಂಗಪ್ಪನ 2ನೇ ಪತ್ನಿ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಮಗು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇದೀಗ ಚಿತ್ರದುರ್ಗ ಹಾಗೂ ದಾವಣಗೆರೆ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.