ದಾವಣಗೆರೆ: ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವರ್ಷ ಉತ್ತಮ ಮಳೆಯಾಗಿದೆ. ಮೆಕ್ಕೆಜೋಳ, ಭತ್ತ ಬೆಳೆಯೂ ಚೆನ್ನಾಗಿ ಬಂದಿದೆ. ಆದರೆ ರೈತರು ಬೆಳೆದ ಬೆಳೆಗೆ ಒಳ್ಳೆಯ ದರ ಸಿಗುತ್ತಿಲ್ಲ. ಮೆಕ್ಕೆಜೋಳ ಹಾಗೂ ಭತ್ತದ ಧಾರಣೆ ಕುಸಿದಿದ್ದು, ಅನ್ನದಾತರು ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಮೆಕ್ಕೆಜೋಳ ಕ್ವಿಂಟಾಲ್ಗೆ 2000 ಹಾಗೂ ಭತ್ತ ಕ್ವಿಂಟಾಲ್ಗೆ 2500 ರೂಪಾಯಿ ದರ ನಿಗದಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಸವಂತಪ್ಪ ಆಗ್ರಹಿಸಿದರು.
ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರವನ್ನು ತೆರೆದು ಬೆಂಬಲ ಬೆಲೆ ಮೂಲಕ ಬೆಳೆ ಖರೀದಿಸಬೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಲ್ಲಾ ಮಟ್ಟದಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ನೆರವಾಗಿತ್ತು. ಅದೇ ರೀತಿಯಲ್ಲಿ ಬಿಜೆಪಿ ಸರ್ಕಾರ ಕೂಡ ಅನ್ನದಾತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.