ದಾವಣಗೆರೆ: ತೋಟಕ್ಕೆ ನೀರು ನುಗ್ಗಿದ್ದರಿಂದ ಕೋಪಗೊಂಡ ರೈತನೋರ್ವ ವಸತಿ ಸಚಿವ ವಿ.ಸೋಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಹರಿಹರದಲ್ಲಿ ನಡೆಯಿತು.
ಹರಿಹರದ ಶೇರಾಪುರದಲ್ಲಿ ನಡೆಯುತ್ತಿರುವ ಕೆಹೆಚ್‌ಬಿ ಲೇಔಟ್ ಕಾಮಗಾರಿ ಪರಿಶೀಲನೆಗೆ ಸಚಿವ ಸೋಮಣ್ಣ ಆಗಮಿಸಿದ್ದ ವೇಳೆ ರೈತ ರಾಜಶೇಖರ್ ಎಂಬುವರು ತರಾಟೆಗೆ ತೆಗೆದುಕೊಂಡರು.
ಶೇರಾಪುರದಲ್ಲಿ ನಡೆಯುತ್ತಿರುವ ಲೇಔಟ್ ಕಾಮಗಾರಿಯಿಂದ ಮಳೆ ನೀರು ರೈತನ ತೋಟಕ್ಕೆ ನುಗ್ಗಿ ಹಾನಿಯಾಗಿತ್ತು. ಈ ಬಗ್ಗೆ ಅವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕೋಪಗೊಂಡ ರೈತ ರಾಜಶೇಖರ್, ಇಂದು ಕಾಮಗಾರಿ ಪರಿಶೀಲನೆಗೆ ಬಂದಿದ್ದ ಸಚಿವರಿಗೆ ಅಧಿಕಾರಿಗಳು ಸ್ಪಂದಿಸದ ಬಗ್ಗೆ ಮಾಹಿತಿ ನೀಡಿ ವಾಗ್ವಾದ ನಡೆಸಿದರು.
ನೀರು ಹರಿಯಲು ಕಾಲುವೆ ನಿರ್ಮಿಸಿಬೇಕು, ಸಮಸ್ಯೆ ಬಗೆಹರಿಸದಿದ್ದರೆ ಜೆಸಿಬಿ ತಂದು ಲೇಔಟ್ ತೆರವುಗೊಳಿಸುತ್ತೇವೆ ಎಂದು ರೈತ ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸಚಿವರಿಗೆ ಘೇರಾವ್ ಹಾಕಿದರು. ಈ ವೇಳೆ ಪೊಲೀಸರು ಬಂದು ಅವರನ್ನು ಕರೆದುಕೊಂಡು ಹೋದರು.
ಓದಿ : ವರಕೂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಸೋಮಶೇಖರ್ ಭೇಟಿ, ಸೋಂಕಿತರೊಂದಿಗೆ ಚರ್ಚೆ