ಹರಿಹರ : ರಾಜ್ಯ ಸರ್ಕಾರವು ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವಂತೆ ನ್ಯಾ. ಸದಾಶಿವ ಆಯೋಗ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ನ್ಯಾ. ನಾಗಮೋಹನ ದಾಸ್ ಅವರ ವರದಿಗಳನ್ನು ವಿಧಾನಸಭೆಯಲ್ಲಿ ಚರ್ಚಿಸಲು ಒತ್ತಾಯಿಸಿ ಹರಿಹರ ತಾಲೂಕು ಡಿಎಸ್‌ಎಸ್ ಸಂಘಟನೆಯಿಂದ ಶಾಸಕ ಎಸ್ ರಾಮಪ್ಪ ನವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಮುಖಂಡರು ಮಾತನಾಡಿ, ಕಳೆದ 30 ವರ್ಷಗಳಿಂದ ಹಲವಾರು ದಲಿತ ಸಂಘಟನೆಗಳು ಒಳ ಮೀಸಲಾತಿಗೆ ಒತ್ತಾಯಿಸಿ ಅನೇಕ ಪ್ರತಿಭಟನೆ, ಹೋರಾಟಗಳನ್ನು ಅವಿರತವಾಗಿ ಮಾಡುತ್ತಾ ಬಂದಿವೆ. ನ್ಯಾ.ಸದಾಶಿವ ಆಯೋಗದ ವರದಿಯು ಈಗಾಗಲೇ ಸರ್ಕಾರದ ಬಳಿ ಇದೆ. ಅಲ್ಲದೆ ಇತ್ತೀಚೆಗೆ ಪರಿಶಿಷ್ಟ ವರ್ಗಗಳ ಮೀಸಲಾತಿಗಾಗಿ ನ್ಯಾ. ನಾಗ ಮೋಹನ ದಾಸ್ ಆಯೋಗದ ವರದಿಯು ಸಹ ಸದ್ಯದಲ್ಲಿ ಸರ್ಕಾರದ ಕೈಸೇರಲಿದೆ ಎಂದರು.
ಮೇಲಿನ ಎರಡು ಆಯೋಗದ ವರದಿಗಳನ್ನು ವಿಧಾನಸಭೆಯ ಅಧಿವೇಶನದಲ್ಲಿ ಕೂಲಂಕಷವಾಗಿ ಚರ್ಚಿಸಿ, ಶಿಫಾರಸ್ಸಿನೊಂದಿಗೆ ಕೇಂದ್ರ ಸರ್ಕಾರಕ್ಕೆ ರವಾನಿಸಲು ನಮ್ಮ ಸಂಘಟನೆಯು ಒತ್ತಾಯಿಸುತ್ತಿದೆ ಎಂದ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಸಂತೋಷ್ ನೋಟದವರ್, ತಾಲೂಕು ಅಧ್ಯಕ್ಷ ಎಂ ಮಂಜುನಾಥ್, ಜಿಲ್ಲಾ ಸಮಿತಿಯ ವಿನಾಯಕ, ನಾಮದೇವ, ದಲಿತ ಮುಖಂಡ ಸಿ ನಾಗರಾಜ್, ಸಂಘಟನೆಯ ಮಾರುತಿ, ಗೋಪಿ , ಬಿ ಎಂ ಭಾಸ್ಕರ್, ಕೀರ್ತಿ ಮುಂತಾದವರು ಉಪಸ್ಥಿತರಿದ್ದರು.