ದಾವಣಗೆರೆ: ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿ ಲೋಹದ ಹಕ್ಕಿಗಳ ಹಾರಾಟ ಆರಂಭವಾಗಿದೆ. ಅದೆಷ್ಟೋ ಬಡವರು, ಮಧ್ಯಮ ವರ್ಗದ ಜನರು ವಿಮಾನಯಾನದ ಕನಸು ಕಂಡಿರುತ್ತಾರೆ. ಆ ಕನಸು ನನಸಾದಾಗ ಸಂತಸಕ್ಕೆ ಪಾರವೇ ಇರಲ್ಲ. ಇದಕ್ಕೊಂದು ಉತ್ತಮ ನಿದರ್ಶನ ಇಲ್ಲಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಟ್ನಳ್ಳಿ ಗ್ರಾಮದ ರಾಜಪ್ಪ ವೃತ್ತಿಯಿಂದ ಹಾಲಿನ ವಾಹನ ಓಡಿಸುವ ಚಾಲಕ. ಇವರು ಒಮ್ಮೆಯಾದರೂ ವಿಮಾನ ಹತ್ತಬೇಕು ಎಂದು ಹಲವು ವರ್ಷಗಳಿಂದ ಕನಸು ಕಂಡಿದ್ದರಂತೆ. ಆ ಕನಸು ನನಸಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ 'ಚಟ್ನಳ್ಳಿ ಗ್ರಾಮದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿದ ಮೊದಲಿಗ' ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ನ್ಯಾಮತಿಯಿಂದ ಕೂಗಳತೆ ದೂರದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗದ ವಿಮಾನ ನಿಲ್ದಾಣದಿಂದ ರಾಜಪ್ಪ ಬೆಂಗಳೂರಿಗೆ ಪ್ರಯಾಣಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಏನೂ ಕೆಲಸ ಇಲ್ಲದಿದ್ದರೂ ಕೂಡ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಬಳಿಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಾಪಸ್ ಆಗಿದ್ದಾರೆ. ರಾಜಪ್ಪ ಅವರ ಅನಿಸಿಕೆ ಇರುವ ವಿಡಿಯೋವನ್ನು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಶಿವಮೊಗ್ಗದ ಒಬ್ಬ ಸಾಮಾನ್ಯ ರೈತ ಕುವೆಂಪು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೋಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್ವೈ, ಪಾಟೀಲ್, ಈಶ್ವರಪ್ಪ
ಉದ್ಘಾಟನೆ ವೇಳೆ ಟಿಕೆಟ್ ಬಗ್ಗೆ ವಿಚಾರಿಸಿದ್ದ ರಾಜಪ್ಪ: ಕುವೆಂಪು ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಿದ ಮರುದಿನವೇ ರಾಜಪ್ಪ ಅವರು ವಿಮಾನ ಹಾರಾಟದ ಬಗ್ಗೆ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ್ದರಂತೆ. ಕಾಮಗಾರಿಗಳು ಇನ್ನೂ ನಡೆಯುತ್ತಿವೆ. ಶೀಘ್ರದಲ್ಲಿ ವಿಮಾನ ಬರಲಿದೆ ಎಂದು ಇಲ್ಲಿನ ಸಿಬ್ಬಂದಿ ಮಾಹಿತಿ ನೀಡಿದ್ದರಂತೆ. ಆದರೆ ಜೀವನದಲ್ಲಿ ಒಮ್ಮೆ ವಿಮಾನ ಹತ್ತಲೇಬೇಕು ಎಂಬ ಮಹದಾಸೆ ಅವರನ್ನು ಪದೇ ಪದೇ ಪ್ರೇರೇಪಿಸುತ್ತಿತ್ತಂತೆ. ಹಾಗಾಗಿ ಇಂಡಿಗೋ ವಿಮಾನ ಬಂದ ತಕ್ಷಣ 2,920 ಹಣ ನೀಡಿ ಟಿಕೆಟ್ ಪಡೆದು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದಾರೆ. ಬಳಿಕ ಮತ್ತೊಂದು ಟಿಕೆಟ್ ತೆಗೆಸಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿಳಿದು ತಮ್ಮ ಹಲವು ವರ್ಷಗಳ ಕನಸು ನನಸಾಗಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜಪ್ಪ "ಜೀವನದಲ್ಲಿ ಒಮ್ಮೆಯಾದರೂ ವಿಮಾನ ಹತ್ತಬೇಕೆಂದು ಸಂಕಲ್ಪ ಮಾಡಿದ್ದೆ. ಅದಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ಅದರಲ್ಲೂ ಚಟ್ನಳ್ಳಿ ಗ್ರಾಮದಲ್ಲಿ ಶಿವಮೊಗ್ಗದಿಂದ ವಿಮಾನ ಹತ್ತಿದ ಮೊದಲಿಗ ನಾನು. ಏನೂ ಕೆಲಸ ಇಲ್ಲದಿದ್ದರೂ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ್ದೇನೆ. ಈ ಪ್ರಯಾಣ ಮಾಡಿದ್ದರಿಂದ ನಮ್ಮ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ" ಎಂದು ತಮ್ಮ ಮನದಾಳವನ್ನು ರಾಜಪ್ಪ ಹಂಚಿಕೊಂಡಿದ್ದಾರೆ.
'ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿಮಾಣವಾಗಿರುವುದು ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾಗಿದೆ. ತುರ್ತು ಪ್ರಯಾಣಕ್ಕೆ ಇದು ಹೆಚ್ಚು ಅನುಕೂಲವಾಗಲಿದೆ' ಎನ್ನುತ್ತಾರೆ ರಾಜಪ್ಪ.
ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ಪ್ರಯಾಣಿಕರ ಅನುಭವದ ಮಾತುಗಳು