ದಾವಣಗೆರೆ: ಅವರಿಗೆ ಒಬ್ಬಳೇ ಮಗಳು. ಬಡ ಕುಟುಂಬ ಬೇರೆ. ಬಾಡಿಗೆ ಆಟೋ ಓಡಿಸಿ ತಮ್ಮ ಜೀವನ ಸಾಗಿಸುತ್ತಿದ್ದ ಕುಟುಂಬ ಮದುವೆ ಎಂಬ ವಿಚಾರ ಬಂದಾಗ ಮನೆಮಗಳನ್ನು ಕೈ ತುಂಬಾ ವರದಕ್ಷಿಣೆ, ಚಿನ್ನಾಭರಣ ನೀಡಿ ಮದುವೆ ಮಾಡಿ ಕೊಟ್ಟಿದ್ದರು. ಆದರೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಮಗಳು ಬಲಿಯಾಗಿದ್ದಾಳೆ.
ದಾವಣಗೆರೆ ನಗರದ ಬಂಬೂಬಜಾರಗ್ನ ನಿವಾಸಿ ಬೀಬಿ ಹಾಜೀರಾ (19) ಸಾವನ್ನಪ್ಪಿದ ಗೃಹಿಣಿ. ಹಾಜೀರಾ ಹಾಗು ದಾವಣಗೆರೆ ನಗರದ ಎಸ್ಎಸ್ ಎಮ್ ನಗರದ ನಿವಾಸಿ ಇಮ್ರಾನ್ ಎಂಬ ಯುವಕನಿಗೆ ಕಳೆದ ಎಂಟು ತಿಂಗಳ ಹಿಂದೆ ಮದುವೆಯಾಗಿತ್ತು. ಮದುವೆಯಾಗಿ ಕೇವಲ ಎಂಟು ತಿಂಗಳ ಕಾಲ ಜೀವನ ನಡೆಸಿದ ಪತಿ ಇಮ್ರಾನ್ ವರದಕ್ಷಿಣೆ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ. ವರದಕ್ಷಿಣೆಗಾಗಿ ಸತತವಾಗಿ 15 ದಿನ ಪತಿ, ಅತ್ತೆ, ನಾದಿನಿ, ಮೈದುನ ಈ ಎಲ್ಲರೂ ಸೇರಿ ಹಿಂಸೆ ನೀಡಿದ್ದಾರೆಂದು ಮೃತಳ ತಾಯಿ ರಿಹಾನ ಬಾನು ಆರೋಪಿಸಿದ್ದಾರೆ.
![ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ](https://etvbharatimages.akamaized.net/etvbharat/prod-images/11071987_cuis.jpg)
ಇತ್ತೀಚಿಗೆ ಸ್ವಂತ ವ್ಯಾಪಾರ ಮಾಡಲು ತವರಿನಿಂದ ಹಣ ಹಾಗೂ ಬೈಕ್ ತಂದುಕೊಡು ಎಂದು ಪತಿ ಪೀಡಿಸುತ್ತಿದ್ದನಂತೆ. ಇದರಿಂದ ನೊಂದ ಗೃಹಿಣಿ ತನ್ನ ತವರು ಮನೆಗೆ ಬಂದು ತಾಯಿ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಕೆಲ ದಿನಗಳಿಂದ ತವರು ಮನೆಯಲ್ಲಿಯೇ ಇದ್ದ ಹಾಜೀರಾ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ಬೀಬಿ ಹಾಜೀರಾ ಕುಟುಂಬ ಆಗ್ರಹಿಸಿದೆ.
ಪತಿ ಇಮ್ರಾನ್ ಹಾಗು ಅವರ ಕುಟುಂಬದ ವಿರುದ್ಧ ದಾವಣಗೆರೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
![ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ](https://etvbharatimages.akamaized.net/etvbharat/prod-images/11071987_cuis3.jpg)