ದಾವಣಗೆರೆ: ಅಪಘಾತದಲ್ಲಿ ಮೃತಪಟ್ಟ ಯುವಕನ ಮನೆಗೆ ಬಂದ ಶ್ವಾನವೊಂದು ಕುಟುಂಬಸ್ಥರಿಗೆ ಸಾಂತ್ವನ ಹೇಳುವ ರೀತಿಯಲ್ಲಿ ವರ್ತಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಕಾರ್ಯನಿಮಿತ್ತ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ತೆರಳುತ್ತಿದ್ದ ಯುವಕ ತಿಪ್ಪೇಶ್ (21) ಬೈಕ್ನಿಂದ ಬಿದ್ದು ಮೃತಪಟ್ಟಿದ್ದರು. ಶ್ವಾನ ಅಡ್ಡ ಬಂದಿದ್ದರಿಂದ ಈ ಅಪಘಾತ ಸಂಭವಿಸಿತ್ತು ಎಂದು ತಿಳಿದುಬಂದಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ. ಇದೀಗ ಮೃತ ತಿಪ್ಪೇಶನ ಮನೆಯನ್ನು ಹುಡುಕಿಕೊಂಡು ಶ್ವಾನವೊಂದು ಬಂದಿದ್ದು, ಕುಟುಂಬಸ್ಥರಿಗೆ ತನ್ನದೇ ಭಾಷೆಯಲ್ಲಿ ಸಮಾಧಾನಿಸುವಂತೆ ವರ್ತಿಸಿದೆ. ಈ ವಿಸ್ಮಯಕ್ಕೆ ಕುಟುಂಬಸ್ಥರು ಸೇರಿ ಗ್ರಾಮಸ್ಥರೆಲ್ಲ ಅಚ್ಚರಿಗೊಂಡಿದ್ದಾರೆ.
ಕಳೆದ ಗುರುವಾರ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಯುವಕ ತಿಪ್ಪೇಶ್ ತನ್ನ ಸಹೋದರಿಯನ್ನು ಬಿಟ್ಟು ಬರಲು ತೆರಳಿದ್ದರು. ಹೀಗೆ ಬಿಟ್ಟು ವಾಪಸ್ ಬರುವಾಗ ಹೊನ್ನಾಳಿ ತಾಲೂಕಿನ ಕುರುಬರ ವಿಟ್ಲಾಪುರದ ಬಳಿ ಬೈಕ್ಗೆ ಇದೇ ಶ್ವಾನ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು. ಆತ ಮೃತಪಟ್ಟ ಮೂರನೇ ದಿನಕ್ಕೆ ಅದೇ ಶ್ವಾನ ಅಚ್ಚರಿಯಂತೆ ಆತನಿದ್ದ ಮನೆಗೆ ಆಗಮಿಸಿದೆ. ಮನೆಯ ಕೊಠಡಿ, ಅಡುಗೆ ಮನೆಯನ್ನೆಲ್ಲ ಸುತ್ತಾಡಿದೆ. ಮೃತ ವ್ಯಕ್ತಿಯ ತಾಯಿಯನ್ನು ಸಂತೈಸುತ್ತಿರುವ ದೃಶ್ಯ ನಮಗೆ ಅಚ್ಚರಿ ತರಿಸಿತು ಎನ್ನುತ್ತಾರೆ ಮೃತನ ಮಾವ ಸಂದೀಪ್.
ನಾಯಿ ಅಡ್ಡ ಬಂದಿದ್ದರಿಂದ ಬೈಕ್ ಪಲ್ಟಿಯಾಗಿ ತಿಪ್ಪೇಶ್ ಮೃತಪಟ್ಟಿರುವ ಸುದ್ದಿ ಕೇಳಿ ನಮಗೂ ಬಹಳ ಬೇಸರ ಅನ್ನಿಸಿತು. ಈ ಘಟನೆಗೆ ಇಡೀ ಗ್ರಾಮವೇ ಮಮ್ಮಲ ಮರುಗಿದೆ. ಆದರೆ, ಅಂತ್ಯಸಂಸ್ಕಾರದ ಮೂರು ದಿನಗಳ ಬಳಿಕ ಕಪ್ಪು ಬಣ್ಣದ ಅದೇ ಶ್ವಾನ ಮನೆಗೆ ಧಾವಿಸಿತು. ಬೀದಿ ನಾಯಿ ಇರಬಹುದೆಂದು ತಿಳಿದು ಓಡಿಸಿದೆವು. ಆದರೆ, ಆ ನಾಯಿ ಮನೆ ಬಿಟ್ಟು ತೆರಳಲೇ ಇಲ್ಲ. ದೈವ ಲೀಲೆಯೋ, ಕಾಕತಾಳಿಯವೋ ಗೊತ್ತಿಲ್ಲ. ತಿಪ್ಪೇಶನ ತಾಯಿಯ ಪಕ್ಕ ಕುಳಿತು ಬಾಲ ಅಲ್ಲಾಡಿಸುತ್ತಾ ಸಂತೈಸಿರುವ ಪರಿ ನಿಜಕ್ಕೂ ಅಚ್ಚರಿ ಉಂಟುಮಾಡಿತು. ಏಕಾಏಕಿ ಬಂದ ನಾಯಿ, ತಿಪ್ಪೇಶ್ ಅವರ ತಾಯಿಯನ್ನು ಕಂಡ ತಕ್ಷಣ ಆಕೆಯ ಸುತ್ತ ಸುತ್ತಾಡಿ ಪಕ್ಕದಲ್ಲೇ ಕುಳಿತುಕೊಂಡಿದೆ. ಇದೇ ಶ್ವಾನ ಅಂದು ಬೈಕ್ಗೆ ಅಡ್ಡ ಬಂದಿದ್ದು ಅಂತ ಖಾತ್ರಿಪಡಿಸಿಕೊಂಡು ನಮಗೂ ಅಚ್ಚರಿಯಾಯಿತು ಎನ್ನುತ್ತಾರೆ ಮೃತ ವ್ಯಕ್ತಿಯ ಸಂಬಂಧಿಕರಾದ ಸಂದೀಪ್ ಮತ್ತು ಯಶೋಧಮ್ಮ.
ಇದನ್ನೂ ಓದಿ: ಒಂದಲ್ಲ, ಎರಡಲ್ಲ, 4 ತಿಂಗಳು; ಶವಾಗಾರದ ಮುಂದೆ ಮೃತ ಮಾಲೀಕನಿಗೋಸ್ಕರ ಎದುರು ನೋಡುತ್ತಿದೆ ಸಾಕು ನಾಯಿ!
ಇತ್ತೀಚೆಗೆ ಕೇರಳದ ಕಣ್ಣೂರು ಎಂಬಲ್ಲಿ ಇಂತಹದ್ದೇ ಮನಕಲಕುವಂತಹ ಘಟನೆ ನಡೆದಿತ್ತು. ತನ್ನ ಮೃತಪಟ್ಟ ಮಾಲೀಕನಿಗಾಗಿ ಒಂದಲ್ಲ, ಎರಡಲ್ಲ ಕಳೆದ ನಾಲ್ಕು ತಿಂಗಳಿಂದ ಆಸ್ಪತ್ರೆಯ ಶವಾಗಾರದ ಮುಂದೆ ಸಾಕು ನಾಯಿ ಕಾಯುತ್ತಿದೆ ಎಂದು ವರದಿಯಾಗಿತ್ತು. ತನ್ನ ಮಾಲೀಕ ಇನ್ನಿಲ್ಲ. ಆತ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ಅರಿಯದ ಈ ಮೂಕಜೀವಿಯ ಕಥೆ ಮನಕಲಕುವಂತಿತ್ತು.