ದಾವಣಗೆರೆ: ಪರಿಸರ ವಿಮೋಚನಾ ಪತ್ರದಲ್ಲಿ ವಿಧಿಸಿರುವ ಷರತ್ತು ಉಲ್ಲಂಘಿಸುವ ಮರಳು ಗುತ್ತಿಗೆದಾರರಿಗೆ, ಸ್ಥಳದಲ್ಲಿಯೇ ದಂಡ ವಿಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಮರಳು ಮಾರಾಟ ಮಾಡುವ ವಾಹನಗಳ ಮಾಲೀಕರಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮರಳು ಪರವಾನಗಿಯನ್ನು ಒಂದು ಬಾರಿ ಪಡೆದುಕೊಂಡ ಬಳಿಕ, ಒಂದಕ್ಕಿಂತ ಹೆಚ್ಚು ಬಾರಿ ಮರಳು ಸಾಗಾಣಿಕೆ ಮಾಡುವ ವಾಹನಗಳಿಗೆ ಹಾಗೂ ಅಕ್ರಮ ಮರಳು ಸಾಗಾಣಿಕೆ ಮಾಡುವ ವಾಹನಗಳಿಗೂ ಸ್ಥಳದಲ್ಲಿಯೇ ದಂಡವನ್ನು ವಿಧಿಸುವಂತೆ ಸೂಚಿಸಿದ್ದಾರೆ.
ಮರಳು ಮಾರಾಟ ಮಾಡುವ ವಾಹನಗಳಾದ ಎತ್ತಿನಗಾಡಿಗೆ ರೂ. 5,000, ಟ್ರ್ಯಾಕ್ಟರ್ಗೆ ರೂ. 25, 000, ಮಜ್ಡಾ ವಾಹನಕ್ಕೆ ರೂ. 50,000 ಹಾಗೂ ಟಿಪ್ಪರ್ ಅಥವಾ ಲಾರಿಗಳಿಗೆ 75,000 ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.