ದಾವಣಗೆರೆ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕುರುಬ ಅಧಿಕಾರಿಗಳನ್ನು ಇಟ್ಟುಕೊಂಡು ಆಡಳಿತ ನಡೆಸಿದರು ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ದಾವಣಗೆರೆಯಲ್ಲಿ ಜಿಲ್ಲಾ ಕುರುಬರ ಸಂಘ ಕಿಡಿಕಾರಿದ್ದು, ಶಾಮನೂರು ವ್ಯಂಗ್ಯವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಾಮನೂರು ಶಿವಶಂಕರಪ್ಪನವರು ಜಿಲ್ಲಾ ಉಸ್ತುವಾರಿಗಳಾಗಿದ್ದರು. ಆಯಾ ಜಿಲ್ಲೆಯ ಜನಪ್ರತಿನಿಧಿಗಳ ಸಲಹೆಯಂತೆ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ, ಆದರೆ ಕುರುಬ ಅಧಿಕಾರಿಗಳೇ ತುಂಬಿದ್ದರು ಎನ್ನುವುದು ಸರಿಯಲ್ಲ, ಆಗ ಜಿಲ್ಲಾಧಿಕಾರಿಯಾಗಿ ಡಿಎಸ್ ರಮೇಶ್, ದ್ಯಾಬೇರಿ ಇದ್ದರು, ಅವರು ಬೇರೆ ಜನಾಂಗದವರು, ಜಿಲ್ಲೆಯಲ್ಲಿ ಎಲ್ಲಾ ಜಾತಿಯ ಅಧಿಕಾರಿಗಳು ಬಂದು ಹೋಗಿದ್ದಾರೆ, ಆದರೆ ಒಂದೇ ಜಾತಿಯನ್ನು ಟಾರ್ಗೆಟ್ ಮಾಡಿ ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಗಧೆ ಕೊಟ್ಟು ಸನ್ಮಾನಿಸಿದವರು ಇವರೇ, ಬಳಿಕ ಇದೇ ಸಮುದಾಯ ಪ್ರತ್ಯೇಕ ಲಿಂಗಾಯಿತ ಧರ್ಮ ಮಾಡಿ ಎಂದು ಕೇಳಿಕೊಂಡ ಹಿನ್ನಲೆ ಶಿಫಾರಸು ಮಾಡಲಾಗಿತ್ತು, ಆದರೆ ಬಳಿಕ ಸಿದ್ದರಾಮಯ್ಯರನ್ನು ತೆಗಳಲಾಯಿತು, ಪದೇ ಪದೇ ಸಿದ್ದರಾಮಯ್ಯರವರನ್ನು ಬೈದಾಗಲು ಸಹಿಸಿಕೊಂಡು ಬಂದಿದ್ದೇವೆ ಎಂದು ಎಚ್ಚರಿಕೆ ನೀಡಿದರು.