ದಾವಣಗೆರೆ: ಕೊರೊನಾ ವೈರಸ್ ನಿಯಂತ್ರಣ ಮಾಡುವ ಹಿನ್ನೆಲೆ ರಾಷ್ಟ್ರವೇ ಲಾಕ್ ಡೌನ್ ಆದ ಕಾರಣ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ನೆರೆ ರಾಜ್ಯದ ಕಾರ್ಮಿಕರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಹನುಮಂತರಾಯ ಅವರು, ಆಹಾರದ ಕಿಟ್‍ಗಳನ್ನು ವಿತರಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ನೆರೆ ರಾಜ್ಯದ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಲಾಗದ ಹಿನ್ನೆಲೆಯಲ್ಲಿ ಅವಶ್ಯಕವಾದ ಆಹಾರ ಪೂರೈಕೆ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಜಾರ್ಖಂಡ್, ಬಿಹಾರ, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶದಿಂದ ಬಂದಂತಹ ಸುಮಾರು 80 ಜನ ಕಾರ್ಮಿಕರಿಗೆ 1 ಸಾವಿರ ವೆಚ್ಚದ ಆಹಾರದ ಕಿಟ್ ವಿತರಿಸಲಾಯಿತು.
ಅಕ್ಕಿ, ಬೇಳೆ, ಹಿಟ್ಟು, ಬೆಲ್ಲ ಸೇರಿದಂತೆ ದೈನಂದಿನ ಅವಶ್ಯಕತೆಯ ದಿನಸಿ ಪದಾರ್ಥಗಳನ್ನು ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ, ಈಗಾಗಲೇ 16 ಕಡೆಗಳಲ್ಲಿ ತಂಗುದಾಣ, ಕಲ್ಯಾಣ ಮಂಟಪಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಿಮ್ಮನ್ನೆಲ್ಲ ಅಲ್ಲೇ ಇಟ್ಟಿಕೊಂಡು ಕಾಳಜಿ ಮಾಡುತ್ತೇವೆ ಎಂದರೆ ಕಾರ್ಮಿಕರು ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರಿರುವ ಕಡೆಗಳಲ್ಲಿಯೇ ಬೇಕಾದ ಸೌಲಭ್ಯ ಒದಗಿಸುತ್ತಿದ್ದೇವೆ. ಜೊತೆಗೆ ಹರಿಹರದಲ್ಲಿಯೂ ಕೂಡ ಉತ್ತರ ಪ್ರದೇಶದಿಂದ ಬಂದಂತಹ ಅಲೆಮಾರಿ ಜನರಿಗೆ ಜಿಲ್ಲಾಡಳಿತದಿಂದ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಜಿಲ್ಲಾಡಳಿತದಲ್ಲಿ ಸುಮಾರು 20 ಕೋಟಿ ಹಣ ಇದ್ದು, ಯಾವುದಕ್ಕೂ ಕೊರತೆ ಇಲ್ಲ. ಈ ಹಿನ್ನೆಲೆಯಲ್ಲಿ ಯಾರನ್ನೂ ಕೂಡ ಹಸಿವಿನಿಂದ ಇರದಂತೆ ನೋಡಿಕೊಳ್ಳುತ್ತೇವೆ. ಬಳ್ಳಾರಿ ಜಿಲ್ಲಾಧಿಕಾರಿ ತಿಳಿಸಿರುವ ಪ್ರಕಾರ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬರು ಮಾ.16ರಿಂದ ದಾವಣಗೆರೆಯ ಇಎಸ್‍ಐ ಆಸ್ಪತ್ರೆಗೆ ಬಂದು ತೋರಿಸಿಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ ವೈದ್ಯರನ್ನು ಹಾಗೂ ಅವರ ಅಟೆಂಡರ್ ಅವರನ್ನು ಕೂಡ ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ. ಅವರಲ್ಲಿ ಯಾವುದೇ ಲಕ್ಷಣ ಕಂಡುಬಂದಿಲ್ಲ. ಆ ವ್ಯಕ್ತಿ ರೈಲು ಮುಖಾಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.