ಹಾವೇರಿ: ನೆರೆ ಸಂತ್ರಸ್ತರ ನೋವು ಕಷ್ಟ ಏನು ಎನ್ನುವುದು, ಅನುಭವಿಸಿದವರಿಗೆ ಮಾತ್ರ ಗೊತ್ತು. ನೋವು ಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾನವೀಯ ಸಂಬಂಧಗಳನ್ನು ಬೆಸೆಯುವ ಕಾರ್ಯಕ್ಕೆ ಮಠ ಮುಂದಾಗಿದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ಜಿಲ್ಲೆ ನಾಗನೂರು ಗ್ರಾಮದ ನೆರೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಸರ್ಕಾರ ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡದೆ, ಸಣ್ಣ, ಸಣ್ಣ ಬ್ಯಾರೇಜ್ ನಿರ್ಮಿಸಲು ಒತ್ತು ನೀಡಬೇಕು. ನೆರೆಪೀಡಿತ ಗ್ರಾಮಗಳಿಂದ ಸಾವಿರ ಮಕ್ಕಳನ್ನ ದತ್ತು ಪಡೆದು, ಅವರಿಗೆ ಉಚಿತ ವಸತಿ ಶಿಕ್ಷಣ ನೀಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಾನಗಲ್ ತಾಲೂಕಿನ ಕೂಡಲದ ಗುರುನಂಜೇಶ್ವರಮಠದ ಮಹೇಶ್ವರಶ್ರೀಗಳು ಪಾಲ್ಗೊಂಡಿದ್ದರು.