ದಾವಣಗೆರೆ: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದೆ. ಮಾತ್ರವಲ್ಲ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಿರುವ ಈ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ ಎಂಬ ಆಕ್ರೋಶ ಸಭೆಯಲ್ಲಿ ವ್ಯಕ್ತವಾಗಿದೆ. ಜಗಳೂರು ತಾಲೂಕಿನಲ್ಲಿ ಬರ, ಉಳಿದ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆಯಾದರೂ ಇದು ಸಾಕಾಗುತ್ತಿಲ್ಲ. ಯಾವುದೇ ಜಲ ಮೂಲ, ನದಿ ಮೂಲಗಳು ಇಲ್ಲದ ತಾಲೂಕಾಗಿರುವ ಜಗಳೂರಿನಲ್ಲಿ 140 ಕೊಳವೆ ಬಾವಿಗಳು ವಿಫಲವಾಗಿವೆ. 46 ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. ಇಂಥ ದುಃಸ್ಥಿತಿಯಲ್ಲಿಯೂ ಅಧಿಕಾರಿಗಳು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಎಸ್.ವಿ.ರಾಮಚಂದ್ರ ದೂರಿದರು.
ಭದ್ರಾ ಮೇಲ್ದಂಡೆ ಯೋಜನೆ ನಮಗೆ ಆಸರೆಯಾಗಿದ್ದು, ಇದು ಅನುಷ್ಠಾನಕ್ಕೆ ಬರಬೇಕು. ಈ ಮೂಲಕ ನೀರು ಹರಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಬೇಕು ಎಂದು ರಾಮಚಂದ್ರಪ್ಪ ಆಗ್ರಹಿಸಿದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್, ಈ ಬಗ್ಗೆ ನಿರ್ಣಯ ಮಾಡಿ ನಾವು ಕಳುಹಿಸುತ್ತೇವೆ. ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕಾಗಿರುವುದು ಶಾಸಕರು ಎಂದರು. ಆಗ ಮಾತನಾಡಿದ ಶಾಸಕರು, ನೀವು ಕಳುಹಿಸಿ, ಅಲ್ಲಿ ನಾವು ಮಾತನಾಡುತ್ತೇವೆ ಎಂದು ಹೇಳಿದರು.
ಇನ್ನು ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಾಗೀಶ್ ಸ್ವಾಮಿ, ಓಬಳಪ್ಪ, ಮಹೇಶ್, ಕಳಪೆ ಬೀಜಗಳನ್ನು ರೈತರಿಗೆ ಒದಗಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಯಾವ ಪ್ರದೇಶದಲ್ಲಿ ಏನು ಬೆಳೆಯುತ್ತಾರೆ ಎಂಬ ಬಗ್ಗೆ ನಿಮಗೆ ಮಾಹಿತಿ ಇರುತ್ತದೆ. ಹಾಗಾಗಿ, ನಿಗಾ ವಹಿಸಬೇಕು ಎಂದರೆ, ಯಾವ ಕಂಪನಿಯ ಬೀಜ ಒಳ್ಳೆಯದು ಎಂಬ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಿ ಎಂದು ತೇಜಸ್ವಿ ಪಟೇಲ್ ಸಲಹೆ ನೀಡಿದರು.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆದು ಹತ್ತು ತಿಂಗಳಾಗಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಎರಡು ತಿಂಗಳು ಬೇಕಾಯಿತು. ಇದು ಜಿಲ್ಲಾ ಪಂಚಾಯಿತಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ಇದನ್ನು ಖಂಡಿಸುತ್ತೇನೆ ಎಂದು ತೇಜಸ್ವಿ ಪಟೇಲ್ ಹೇಳಿದರು.