ದಾವಣಗೆರೆ: ನೈಸರ್ಗಿಕ ವಿಕೋಪದಿಂದ ಜನರು ಸಾಕಷ್ಟು ಸಂಕಷ್ಟ ಅನುಭವಿಸುವುದು ಗೊತ್ತೇ ಇದೆ. ಅದರಲ್ಲೂ ಮನೆಗಳು ಬಿದ್ದು ಎಷ್ಟೋ ಜನರು ಬೀದಿಯಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ. ಇವರಿಗಾಗಿಯೇ ಸರ್ಕಾರ ಗ್ರೇಡ್ ಪ್ರಕಾರ ಪರಿಹಾರ ಕೂಡ ನೀಡುತ್ತಿದೆ. ಆದರೆ ಮನೆ ಕಳೆದುಕೊಂಡವರಿಗೆ ಮಾಡಿದ ಪರಿಹಾರದಲ್ಲೂ ಕೂಡ ರಾಜಕೀಯ ಬೆರೆತಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ದಾವಣೆಗೆರೆಯಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಕಿತ್ತಾಟಕ್ಕೆ ಕಾರಣವಾಗಿದೆ.
ಕಳೆದ ಹಲವು ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ಅತಿ ಹೆಚ್ಚು ಮನೆಗಳು ಬಿದ್ದಿವೆ. ಸರ್ಕಾರದಿಂದ ಪರಿಹಾರಕ್ಕೆ ಸಮೀಕ್ಷೆ ಕೂಡ ನಡೆಯುತ್ತಿದೆ. ಅಲ್ಲದೇ, ಸ್ಥಳೀಯ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಸಂತ್ರಸ್ತರ ಕೈಸೇರಬೇಕಿದ್ದ ಹಣ ಇನ್ಯಾರದೋ ಜೇಬಿಗೆ.. ಮಳೆ ಹಾನಿ ಪರಿಹಾರದ ವಿತರಣೆಯಲ್ಲಿ ಅಕ್ರಮ ಆರೋಪ..
ಆದರೆ, ಈ ಪರಿಹಾರದಲ್ಲಿ ಕೂಡ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಪರಿಹಾರ ನೀಡಿ ಕಾಂಗ್ರೆಸ್ ಬೆಂಬಲಿಸಿದ ಜನರಿಗೆ ಪರಿಹಾರ ನೀಡದೇ ಎ ಗ್ರೇಡ್ನಲ್ಲಿ ಕೊಡಬೇಕಿದ್ದ ಪರಿಹಾರವನ್ನು ಸಿ ಗ್ರೇಡ್ ಮಾಡಿ ನೀಡುತ್ತಿದ್ದಾರೆ ಎನ್ನಲಾಗಿದೆ. ಐದು ಲಕ್ಷ ಕೊಡುವ ಕಡೆ ಕೇವಲ 50 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಪರಿಹಾರ ಸರಿಯಾಗಿ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡ ಅವರು ರೇಣುಕಾಚಾರ್ಯ ವಿರುದ್ಧ ಆರೋಪ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರ ಮನೆಗಳು ಅಲ್ಪ ಪ್ರಮಾಣದಲ್ಲಿ ಬಿದ್ದಿದ್ದರೂ ಅದನ್ನು ಜೆಸಿಬಿಯಿಂದ ಬೀಳಿಸಿ 5 ಲಕ್ಷ ಪರಿಹಾರ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: ಇಲ್ಲಿಯವರೆಗೆ ಬೆಳೆ, ಮನೆ ಹಾನಿ ಪರಿಹಾರ ಪಾವತಿಯಾಗಿಲ್ಲ: ಸಿದ್ದರಾಮಯ್ಯ
ಕಳೆದ ದಿನ ತಹಶೀಲ್ದಾರ್ ಕಚೇರಿಯಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಜಟಾಪಟಿ ನಡೆದಿದ್ದು, ಈ ಸಂದರ್ಭದಲ್ಲಿ ಮಾಜಿ ಶಾಸಕ ಶಾಂತನಗೌಡ ತಹಶೀಲ್ದಾರ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಆರೋಪವನ್ನು ತಳ್ಳಿ ಹಾಕಿದ ಶಾಸಕ ಎಂಪಿ ರೇಣುಕಾಚಾರ್ಯ, ರಾಜಕೀಯವಾಗಿ ಹೀಗೆ ಆರೋಪ ಮಾಡುತ್ತಿದ್ದಾರೆ. ಪ್ರತಿಯೊಂದು ಗ್ರಾಮಕ್ಕೆ ತೆರಳಿ ಬಿದ್ದಿರುವ ಮನೆಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡುತ್ತಿದ್ದೇನೆ. ಕೆಲವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಇನ್ನು ಕೆಲವರಿಗೆ ಪರಿಹಾರ ನೀಡಲಾಗುವುದು, ಚುನಾವಣೆ ಬಂದಾಗ ಮಾತ್ರ ಮಾಜಿ ಶಾಸಕರು ಬಂದು ಈ ರೀತಿ ಆರೋಪ ಮಾಡುತ್ತಾರೆ. ದಾಖಲೆಗಳನ್ನಿಟ್ಟು ಆರೋಪ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಒಂದು ತಿಂಗಳೊಳಗಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ಪಾವತಿ : ಸಚಿವ ಆರ್ ಅಶೋಕ್