ದಾವಣಗೆರೆ: "ಮಹಾತ್ಮಾ ಗಾಂಧಿ ರಾಷ್ಟ್ರಪಿತ ಅಲ್ಲ. ರಾಷ್ಟ್ರಪಿತರು ಎಂಬುದಕ್ಕೆ ದಾಖಲೆ ಇದ್ದರೆ ನೀಡಿ'' ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಆರ್ಟಿಐ ಮೂಲಕ ಮಾಹಿತಿ ಪಡೆದಿದ್ದೇವೆ. ಸಂವಿಧಾನದಲ್ಲಿ ಯಾವುದೇ ರಾಷ್ಟ್ರಪಿತನ ಉಲ್ಲೇಖವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳಿಗೆ ತಪ್ಪು ಮಾಹಿತಿ ನೀಡುತ್ತಿವೆ. ನಾವು ಮುಂದೆ ಸರ್ಕಾರ, ಪಠ್ಯ ಪುಸ್ತಕ ರಚನಾ ಸಮಿತಿ, ಶಿಕ್ಷಣ ಇಲಾಖೆ ವಿರುದ್ಧವೂ ದೂರು ದಾಖಲಿಸುತ್ತೇವೆ ಎಂದರು.
ಇಲ್ಲದಿದ್ದರೆ ರಾಷ್ಟ್ರಪಿತ ಎನ್ನುವ ಶಬ್ದವನ್ನ ತೆಗೆಯಬೇಕು. 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಂಗಲ ಪಾಂಡೆ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೋರಾಡಿದ್ದಾರೆ. ಗಾಂಧೀಜಿ ನಂತರ ಬಂದವರು. ಗಾಂಧೀಜಿಯಿಂದಲೇ ಸ್ವಾತಂತ್ರ್ಯ ಸಿಕ್ಕಿತಾ? ಗಾಂಧಿಜೀಯ ವೈಭವೀಕರಣವನ್ನ ನಾವು ವಿರೋಧಿಸುತ್ತೇವೆ. ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೂ ಗಾಂಧೀಜಿಯಷ್ಟೆ ಗೌರವ ನೀಡಬೇಕು ಎಂದು ಹೇಳಿದರು.
ಗಾಂಧಿಜೀಯಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು ಮೂರ್ಖತನ. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಸತ್ಯ ಹೇಳಿಲ್ಲ. ನಾಥೂರಾಮ್ ಗೋಡ್ಸೆ ಪುತ್ಥಳಿ ಅನಾವರಣಗೊಳಿಸಬೇಕು. ಗೋಡ್ಸೆ ಮಹಿಳೆಯರ ಮಾನ ಹಾಗೂ ದೇಶ ವಿಭಜನೆ ಕಾಪಾಡಿದ್ದಾರೆ. ಪಠ್ಯ ಪುಸ್ತಕದಲ್ಲಿ ಗೋಡ್ಸೆ ಚರಿತ್ರೆ ಪ್ರಕಟವಾಗಬೇಕು. ಆತನನ್ನ ಖಳನಾಯಕನನ್ನಾಗಿ ಚಿತ್ರಿಸಲಾಗಿದೆ. ಅದನ್ನು ಬದಲು ಮಾಡಬೇಕು. ಗಾಂಧಿಜೀಯನ್ನು ಗೋಡ್ಸೆ ಹತ್ಯೆ ಮಾಡಿದ ಹಿಂದಿನ ಮರ್ಮ ಹೊರಹಾಕಬೇಕು. ಗೋಡ್ಸೆಯ ಪುತ್ಥಳಿ ನಿರ್ಮಿಸದಿದ್ದರೆ ಮಹಾಸಭಾ ಹೋರಾಟ ಮಾಡಲಿದೆ. ಗೋಡ್ಸೆ ಬಗ್ಗೆ ಜನರಿಗೆ ನಾವು ತಿಳಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.