ದಾವಣಗೆರೆ: "ಕೆಲ ಕಿಡಿಗೇಡಿಗಳಿದ್ದಾರೆ, ವ್ಯವಸ್ಥೆಗೆ ಚಾಲೆಂಜ್ ಮಾಡುವ ಕೆಲವರಿದ್ದಾರೆ. ಏನ್ ಮಾಡ್ತಾರೆ ನೋಡೋಣ ಅನ್ನೋ ಮನೋಭಾವನೆ ಹೊಂದಿದವರಿಗೆ ತಕ್ಕ ಪಾಠ ಕಲಿಸ್ತೇವೆ' ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.
ನಗರದ ಗಾಂಧಿನಗರದಲ್ಲಿ ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕೆಲವರು ಕಲರ್ ಜೆರಾಕ್ಸ್ ಹಾಗೂ ನಕಲಿ ಪ್ರಿಂಟ್ ಮಾಡಿ ಪಾಸ್ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಯಾರೇ ಇಂಥ ದುಷ್ಕೃತ್ಯ ಎಸಗಿದ್ದರೂ ಬಿಡುವುದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಚರ್ಚೆ ನಡೆಸಿ, ತಂಡ ರಚಿಸಿ ತಪ್ಪು ಎಸಗಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಲಾಕ್ ಡೌನ್ ಉಲ್ಲಂಘನೆ ಮಾಡಬೇಡಿ ಎಂದು ಈಗಾಗಲೇ ವಿನಂತಿ ಮಾಡಿಕೊಳ್ಳಲಾಗಿದೆ. ಆರತಿ ಎತ್ತುವ ಮೂಲಕ ಮನವಿ ಮಾಡಿಕೊಂಡಿದ್ದೂ ಆಗಿದೆ. ಒಂದೇ ದಿನದಲ್ಲಿ 1 ಸಾವಿರ ದ್ವಿಚಕ್ರ ವಾಹನಗಳು, 300 ಕಾರುಗಳನ್ನು ಸೀಜ್ ಮಾಡಲಾಗಿದೆ. ಇದರಿಂದ ಜನರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.