ದಾವಣಗೆರೆ : ಹರಪನಹಳ್ಳಿ ತಾಲೂಕಿನ ಅರಸೀಕೆರೆ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಹರಿಹರ ತಾಲೂಕಿನ ಗುತ್ತೂರು ನಿವಾಸಿ ಸಲೀಂಸಾಬ್, ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ ಹನುಮಂತ, ಶಿಕಾರಿಪುರ ತಾಲೂಕಿನ ಕವಾಸೂರು ಸಾಹೇಬ್ ಜಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸ್ಕಾರ್ಪಿಯೋ ವಾಹನ, ಜಾನುವಾರು ಮಾರಾಟ ಮಾಡಿದ್ದ ಸುಮಾರು ₹3.38 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅರಸೀಕೆರೆಯ ತವಡೂರು ತಿರುವಿನ ಬಳಿ ಅನುಮಾನಾಸ್ಪದವಾಗಿ ಕಂಡ ವೇಳೆ ಹರಪನಹಳ್ಳಿ ಡಿವೈಎಸ್ ಪಿ.ಮಲ್ಲೇಶ್ ಮಾರ್ಗದರ್ಶನದಲ್ಲಿ ಕೆ.ಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ವೀರಬಸಪ್ಪ ಕುಸಲಾಪುರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದರು.
ಒಂದು ತಿಂಗಳಲ್ಲಿ ಜಗಳೂರು, ಹರಪನಹಳ್ಳಿ, ದಾವಣಗೆರೆ ತಾಲೂಕಿನ ಹಲವೆಡೆ ಮನೆ ಮುಂದೆ ಕಟ್ಟಲಾಗಿದ್ದ ಜಾನುವಾರುಗಳ ಕಳ್ಳತನ ಹೆಚ್ಚಾಗಿತ್ತು. ಇದು ಪೊಲೀಸರಿಗೂ ತಲೆ ದೊಡ್ಡ ನೋವಾಗಿತ್ತು. ಕಳ್ಳತನವಾಗಿರೋ ಉಳಿದ ಜಾನುವಾರುಗಳ ಪತ್ತೆ ಹಚ್ಚಿ ಸಂಬಂಧಿಸಿದರವರಿಗೆ ಮರಳಿಸೋದಾಗಿ ಹೇಳಿದರು.