ದಾವಣಗೆರೆ: ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ರೈತರ ಬೆಳೆ ಸಮೀಕ್ಷೆ ಎಂಬ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತಿದೆ.
ಈ ಆ್ಯಪ್ಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ, ಮಾಹಿತಿ ವಿನಿಮಯ ಮಾಡುವ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.
ಈ ಯೋಜನೆಯು ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್‍ಲೋಡ್ ಮಾಡುವ ಒಂದು ವಿನೂತನ ಯೋಜನೆಯಾಗಿದೆ. ರೈತರು ಗೂಗಲ್ ಪ್ಲೇ ಸ್ಟೋರ್ ಮೂಲಕ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಜಮೀನುಗಳಲ್ಲಿ ಬೆಳೆದ ಮುಂಗಾರು ಹಂಗಾಮಿನ ಬೆಳೆ ಮಾಹಿತಿಯನ್ನು ತಾವೇ ದಾಖಲು ಮಾಡಬಹುದು. ಜೊತೆಗೆ ಖಾಸಗಿ ನಿವಾಸಿಗಳ ಸಹಯೋಗದೊಂದಿಗೆ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ದಾಖಲಿಸಬಹುದಾಗಿದೆ.
ಜಿಲ್ಲೆಯ ಎಲ್ಲಾ ರೈತರು ತಮ್ಮ ಜಮೀನಿನ ಮುಂಗಾರು ಬೆಳೆ ಮಾಹಿತಿಯನ್ನು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ತಾವೇ ದಾಖಲಿಸಿಕೊಳ್ಳಲು ತಿಳಿಸಿದೆ. ಬೆಳೆ ಸಮೀಕ್ಷೆ ಕೈಗೊಳ್ಳಲು ಗ್ರಾಮ ಮಟ್ಟದಲ್ಲಿ ಪ್ರತಿ ಗ್ರಾಮಗಳಿಗೆ ಖಾಸಗಿ ನಿವಾಸಿಗಳನ್ನು ಆಯ್ಕೆ ಮಾಡಲಾಗಿದ್ದು, ರೈತರು ಬೆಳೆ ಸಮೀಕ್ಷೆ ಕೈಗೊಳ್ಳುವಾಗ ಖಾಸಗಿ ನಿವಾಸಿಗಳ ಸಹಕಾರ ಪಡೆಯಬಹುದಾಗಿದೆ. ಬೆಳೆ ಸಮೀಕ್ಷೆ ಕೈಗೊಳ್ಳುವ ಖಾಸಗಿ ನಿವಾಸಿಗಳಿಗೆ ಅಗತ್ಯ ಸಹಕಾರ ನೀಡಲು ತಿಳಿಸಿದೆ.
ರೈತರು ತಮ್ಮ ಮೊಬೈಲ್‍ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಆ.24 ಕೊನೆಯ ದಿನವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.