ದಾವಣಗೆರೆ : ಜನಸಾಮಾನ್ಯರು ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ನಗದು, ಚಿನ್ನಾಭರಣ, ಬೆಳ್ಳಿ ಹಾಗೂ ವಾಹನಗಳು ಕಳೆದು ಹೋದರೆ ಯಾರಿಗೆ ತಾನೆ ಸಂಕಟವಾಗಲ್ಲ ಹೇಳಿ. ಕಳೆದುಕೊಂಡ ವಸ್ತುಗಳು ಖದೀಮರ ಪಾಲಾಗಿದ್ದವು. ಕಳ್ಳತನವಾಗಿದ್ದ ಎಲ್ಲ ವಸ್ತುಗಳನ್ನು ಇದೀಗ ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟೂ 319 ಪ್ರಕರಣಗಳನ್ನು ಬೇಧಿಸಿರುವ ದಾವಣಗೆರೆ ಪೊಲೀಸರು, ಖದೀಮರಿಂದ ವಶಪಡಿಸಿಕೊಂಡ ವಸ್ತುಗಳನ್ನು ಶುಕ್ರವಾರ ವಾರಸುದಾರರಿಗೆ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಹಸ್ತಾಂತರ ಮಾಡಿದ್ದಾರೆ.
ದಾವಣಗೆರೆ ನಗರದ ಡಿಎಆರ್ ಮೈದಾನದಲ್ಲಿ ಪ್ರಾಪರ್ಟಿ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಖದೀಮರಿಂದ ವಶಕ್ಕೆ ಪಡೆದುಕೊಂಡ ಒಟ್ಟು 5,18,93,743 ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ಇತರೆ ಸಾರ್ವಜನಿಕರಿಗೆ ಸೇರಬೇಕಾದ ವಿವಿಧ ಸ್ವತ್ತುಗಳನ್ನು ಹಸ್ತಾಂತರಿಸಲಾಯಿತು. 2023ರಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 1,032 ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಒಟ್ಟು 319 ಪ್ರಕರಣಗಳನ್ನು ಬೇಧಿಸುವ ಮೂಲಕ ನಾವು ಜನಸಾಮಾನ್ಯರೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಪೊಲೀಸರು ರವಾನಿಸಿದರು. 05.18 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರ, ಮೊಬೈಲ್ ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಾರಸುದಾರರಿಗೆ ಮರಳಿಸಿದರು.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡ ಎಸ್ಪಿ ಉಮಾಪ್ರಶಾಂತ್, "ಕಳೆದ ಒಂದು ವರ್ಷದಲ್ಲಿ 1,039 ಪ್ರಕರಣಗಳ ಪೈಕಿ ಈಗಾಗಲೇ 319 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 2,24,65,000 ರೂಪಾಯಿ ಮೌಲ್ಯದ 4 ಕೆಜಿ 493 ಗ್ರಾಂ ಚಿನ್ನಾಭರಣ, 35,56,910 ರೂಪಾಯಿ ಬೆಲೆಬಾಳುವ 50 ಕೆಜಿ 813 ಗ್ರಾಂ ಬೆಳ್ಳಿ ಆಭರಣ, 84,75,280 ರೂ. ಮೌಲ್ಯದ 175 ದ್ವಿಚಕ್ರ ವಾಹನಗಳು, 65,35,000 ರೂ. ಮೌಲ್ಯದ 21 ನಾಲ್ಕು ಚಕ್ರದ ವಾಹನಗಳು ಹಾಗೂ 1,08,61,553 ರೂಪಾಯಿ ಮೌಲ್ಯದ ಮೊಬೈಲ್ ಹಾಗೂ ನಗದು ಹಣ ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನೆಲ್ಲ ನ್ಯಾಯಾಲಯದ ಆದೇಶದ ಮೇರೆಗೆ ವಾರಸುದಾರರಿಗೆ ಹಿಂದಿರುಗಿಸಲಾಗಿದೆ" ಎಂದು ತಿಳಿಸಿದರು.
ವಾರಸುದಾರರು ಹೇಳಿದ್ದೇನು?: ಕೆಟಿಜೆ ನಗರದ ನಿವಾಸಿ ವೀರೇಶ್ ಪ್ರತಿಕ್ರಿಯಿಸಿ, "ಕಳುವಾಗಿದ್ದ ದ್ವಿಚಕ್ರ ವಾಹನ ಮರಳಿ ನನ್ನ ಕೈ ಸೇರುವಂತೆ ಮಾಡಿದ ಪೊಲೀಸರಿಗೆ ಧನ್ಯವಾದಗಳು. ಬೈಕ್ ಮತ್ತೆ ಸಿಕ್ಕಿರುವುದು ಬಹಳ ಸಂತಸವಾಗುತ್ತಿದೆ. ದೂರು ಕೊಡಲು ಹೋದಾಗ ವಿನಯದಿಂದ ವರ್ತಿಸಿ, ದೂರು ಸ್ವೀಕರಿಸಿ, ಸ್ಥಳ ಪರಿಶೀಲನೆ ಮಾಡುವ ಮೂಲಕ 20 ದಿನದಲ್ಲಿ ನನ್ನ ವಾಹನವನ್ನು ನೋಡುವಂತೆ ಮಾಡಿದ್ದಾರೆ. ಆದ್ದರಿಂದ ಕೆಟಿಜೆ ನಗರ ಠಾಣೆಯ ಪೊಲೀಸರಿಗೆ ಧನ್ಯವಾದಗಳು" ಎಂದರು.
ಇದನ್ನೂ ಓದಿ : ಕೊಪ್ಪಳ: ಜೋರಾಗಿ ಕಿರುಚಿ ಬ್ಯಾಂಕ್ ಕಳ್ಳತನ ತಪ್ಪಿಸಿದ ವ್ಯಕ್ತಿ