ದಾವಣಗೆರೆ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಅನೇಕ ಅಮಾಯಕರು ಡೆಡ್ಲಿ ವೈರಸ್ನಿಂದಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ.
ಆದರೆ, ದಾವಣಗೆರೆಯಲ್ಲಿ ಮಾಸ್ಕ್ ಹಾಕು ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ವ್ಯಕ್ತಿಯೊಬ್ಬ ರೇಗಾಡಿರುವ ಘಟನೆ ನಡೆದಿದೆ. ನಗರದ ಕಾಳಿಕಾದೇವಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಾಸ್ಕ್ ಹಾಕದೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ತಹಶೀಲ್ದಾರ್ ಗಿರೀಶ್ ಮಾಸ್ಕ್ ಎಲ್ಲಿ ಎಂದು ಕೇಳಿ ಬುದ್ಧಿ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ತಹಶೀಲ್ದಾರ್ ಹಾಗೂ ಪೊಲೀಸರ ಮೇಲೆಯೇ ಎಗರಾಡಿದ್ದಾನೆ.
ಈ ವೇಳೆ, ರೇಗಾಡಿದ ವ್ಯಕ್ತಿಗೆ ಗಾಂಧಿ ನಗರ ಪೊಲೀಸರು ಕಪಾಳಮೋಕ್ಷ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ದಾವಣಗೆರೆಯಲ್ಲಿ ಡಿಸಿ. ಎಸ್ಪಿ ವಿಶೇಷ ಮಾಸ್ಕ್ ಜಾಗೃತಿ ಸಹ ಮೂಡಿಸುತ್ತಿದ್ದಾರೆ.