ದಾವಣಗೆರೆ: ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವಂತೆ ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕೋವಿಡ್-19 ನಿಯಂತ್ರಿಸಲು ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ಪೂರ್ವಭಾವಿಯಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣೆಯ ಸ್ವೀಪ್ ಚಟುವಟಿಕೆ ರೀತಿಯಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆ ಕೋವಿಡ್ ಜಾಗೃತಿ ಮೂಡಿಸಲು ಐಇಸಿ ಚಟುವಟಿಕೆಗಳನ್ನು ಜಿಲ್ಲಾದ್ಯಂತ ಕೈಗೊಳ್ಳಬೇಕಿದ್ದು, ಸರ್ಕಾರದ ಸೂಚನೆಯಂತೆ ಇಲಾಖೆಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾರ್ಯಾರಂಭ ಮಾಡಬೇಕು ಎಂದರು.
ಎಲ್ಲ ಸರ್ಕಾರಿ ಕಚೇರಿಗಳ ಅಧಿಕೃತ ಪತ್ರಗಳ ಮೇಲೆ ಮಾಸ್ಕ್ ಕಡ್ಡಾಯವಾಗಿ ಬಳಸಿ, ಅಂತರ ಕಾಯ್ದುಕೊಳ್ಳಿ ಹಾಗೂ ಸ್ಯಾನಿಟೈಸರ್ ಬಳಸಿ ಈ ರೀತಿಯ ಜಾಗೃತಿ ಮೂಡಿಸುವ ಘೋಷಣೆಗಳನ್ನು ಮುದ್ರಿಸಬೇಕು ಎಂದು ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ, ಮೀನುಗಾರಿಕೆ, ಆರೋಗ್ಯ, ಶಿಕ್ಷಣ, ಆಯುಷ್, ಪಾಲಿಕೆ, ಕಾರ್ಮಿಕ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಕುರಿತು ಕರಪತ್ರಗಳು, ಪೋಸ್ಟರ್ಗಳು, ಗೋಡೆ ಬರಹ ಮಾಡುವ ಮೂಲಕ ಮತ್ತು ತಮ್ಮ ವ್ಯಾಪ್ತಿಯ ವಾಟ್ಸ್ಆ್ಯಪ್ , ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು ಹಾಗೂ ಕೊರೊನಾಗೆ ಹೆಚ್ಚು ಗುರಿಯಾಗುವಂತಹ ಗುಂಪುಗಳನ್ನು ಗುರುತಿಸಿ ಜಾಗೃತಿ ಮೂಡಿಸುವ ಸಂಬಂಧ ಕ್ರಿಯಾ ಯೋಜನೆಯನ್ನು ಎಲ್ಲ ಇಲಾಖೆಗಳು ಸಿದ್ದಪಡಿಸಿ ಸಲ್ಲಿಸಬೇಕು. ನಂತರ ಕ್ರಿಯಾ ಯೋಜನೆಯಂತೆ ಕಾರ್ಯ ನಿರ್ವಹಿಸಿ ಪ್ರತಿದಿನ ಜಿ.ಪಂ ಗೆ ವರದಿ ಸಲ್ಲಿಸಬೇಕು ಎಂದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಕೊರೊನಾ ನಿಯಂತ್ರಣ ಜಾಗೃತಿ ಮೂಡಿಸಲು ದೊಡ್ಡ ಬ್ಯಾನರ್ಗಳು, ಬಸ್‍ಗಳ ಮೇಲೆ ಮತ್ತು ಒಳಭಾಗದಲ್ಲಿ ಸ್ಟಿಕ್ಕರ್ಗಳು ಹಾಗೂ ಬಸ್ ಟಿಕೆಟ್‍ಗಳ ಮೇಲೆ ಕೊರೊನ ನಿಯಂತ್ರಣ ಕುರಿತಾದ ಬರಹಗಳನ್ನು ಮುದ್ರಿಸುವಂತೆ ಸೂಚಿಸಿದರು. ನಗರದ ರಾಮ್ ಅಂಡ್ ಕೋ, ಗುಂಡಿ ವೃತ್ತಗಳಲ್ಲಿ ಹಾಗೂ ಇತರ ಚಾಟ್ಸ್ ಅಂಗಡಿಗಳ ಬಳಿ ಸಂಜೆ ಹೊತ್ತು ಜನರು ಸಾಮಾಜಿಕ ಅಂತರ ಪಾಲಿಸದಿರುವುದು ಕಂಡು ಬಂದಿದ್ದು ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಹಾಗೂ ಪೋಸ್ಟರ್ಗಳ ಮೂಲಕ ಅಥವಾ ಮೈಕ್ ಘೋಷಣೆ ಮೂಲಕ ಅರಿವು ಮೂಡಿಸಬೇಕು ಎಂದರು.
ಹೋಂ ಐಸೋಲೇಷನ್ ನಿಯಮಗಳು ಜೊತೆಗೆ ಕೊರೊನಾ ಪಾಸಿಟಿವ್ ಬಂದವರಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಗ್ರಾಮೀಣ ಭಾಗದಲ್ಲಿ ಸಹ ಜಾಗೃತಿ ಹೆಚ್ಚಿಸಬೇಕು, ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಗ್ರಾಮ ಸಭೆಗಳು ನಡೆಯಬೇಕು ಎಂದ ಅವರು ಕೋವಿಡ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಪಲ್ಸ್ ಆಕ್ಸಿಮೀಟರ್ ಇಟ್ಟುಕೊಳ್ಳುವುದು ಒಳಿತು ಎಂದು ಹೇಳಿದರು.