ದಾವಣಗೆರೆ: ಅದು ಸ್ವಾತಂತ್ರ್ಯ ಪೂರ್ವದ ಸರ್ಕಾರಿ ಶಾಲೆ, ಅ ಶಾಲೆ ನಿರ್ಮಾಣ ಆಗಿ ಬರೋಬ್ಬರಿ 80 ವರ್ಷಗಳೇ ಉರುಳಿವೆ. ಆದರೆ ಇಷ್ಟು ಹಳೆಯದಾದ ಶಾಲೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಪಾಠ ಕೇಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ಕೆಲ ಪೋಷಕರು ಶಾಲೆಯ ದುಸ್ಥಿತಿ ನೋಡಿ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸದೇ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದ್ರೆ ಬಡ ಮಕ್ಕಳು ಮಾತ್ರ ಜೀವ ಕೈಯಲ್ಲಿ ಹಿಡಿದು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ದೊಡ್ಡದಾಗಿ ಬಡಾಯಿ ಕೊಚ್ಚಿಕೊಳ್ಳುವ ಹೋರಾಟಗಾರರು ಶೋಚನೀಯ ಸ್ಥಿತಿಗೆ ತಲುಪಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿರುವ ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಎತ್ತಿದ ಶಾಲೆಯತ್ತ ಮಾತ್ರ ಗಮನಿಸುತ್ತಿಲ್ಲ. ಶಾಲಾ ದಾಖಲೆಗಳ ಪ್ರಕಾರ ಈ ಸಂಗಾಹಳ್ಳಿಯಲ್ಲಿರುವ ಏಕೈಕ ಸರ್ಕಾರಿ ಶಾಲೆ 1940-41 ರಲ್ಲಿ ನಿರ್ಮಾಣ ಮಾಡಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಒದಗಿಸಬೇಕಾಗಿದೆ.
ದಾಖಲಾತಿಯಲ್ಲಿ ಇಳಿಕೆ.. ಬಡ ಮಕ್ಕಳ ಪಾಲಿಗೆ ಅಕ್ಷರ ಕಲಿಯಲು ಆಸರೆಯಾಗಿರುವ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಇಂತಹ ಶೋಚನೀಯ ಸ್ಥಿತಿ ತಲುಪಿರುವ ಕಟ್ಟಡದಲ್ಲಿ 48 ಬಡ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಶಾಲೆಯ ಪರಿಸ್ಥಿತಿ ಗಮನಿಸಿದ ಪೋಷಕರು ಬೇರೆ ಶಾಲೆಗಳತ್ತ ಮುಖ ಮಾಡಿದ್ದು, ದಾಖಲಾತಿಯಲ್ಲಿ ಗಣನೀಯ ಇಳಿಕೆ ಕಂಡಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಹಾಲೇಶ್ ತಿಳಿಸಿದರು.
ದುಸ್ಥಿತಿಯಲ್ಲಿರುವ ಶಾಲೆಯಲ್ಲಿ 48 ವಿದ್ಯಾರ್ಥಿಗಳ ಅಭ್ಯಾಸ.. ಇದಲ್ಲದೆ 10 ವರ್ಷಗಳ ಹಿಂದೆ ಶಾಲೆಯ ಆವರಣದಲ್ಲಿ ಮಕ್ಕಳಿಗಾಗಿ ನಿರ್ಮಾಣಗೊಂಡಿರುವ 3 ಕೊಠಡಿಗಳು ಮತ್ತು 2 ಶೌಚಾಲಯದ ನೂತನ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಇದಲ್ಲದೆ ಇಡೀ ಶಾಲೆ ದುಸ್ಥಿತಿಗೆ ತಲುಪಿರುವುದರಿಂದ 30 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕೆಂಪು ಹಂಚಿನ 5 ಕೊಠಡಿಗಳ ಈ ಕಟ್ಟಡದಲ್ಲಿ 48 ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿ ಪಾಠ ಪ್ರವಚನ ಮಾಡಲಾಗುತ್ತಿದೆ.
ಈ ಕೊಠಡಿಗಳು ಕೂಡ ಬಿರುಕು ಬಿದ್ದಿದ್ದು, ಮೇಲ್ಛಾವಣಿ ಸಂಪೂರ್ಣವಾಗಿ ಗೆದ್ದಲು ಹಿಡಿದು ಕುಸಿಯುವ ಹಂತ ತಲುಪಿದೆ. ಯಾವುದೇ ಕ್ಷಣದಲ್ಲಾದರೂ ಮೇಲ್ಛಾವಣಿ ಕುಸಿಯುವ ಭೀತಿ ಮಕ್ಕಳಿಗೆ ಮತ್ತು ಶಾಲೆಯ ಸಿಬ್ಬಂದಿಗೆ ಕಾಡುತ್ತಿದೆ. ಇದನ್ನು ಗಮನಿಸಿದ ಯುವ ಬ್ರಿಗೇಡ್ ದಾವಣಗೆರೆ ತಂಡ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲವಂತೆ.
ಇನ್ನಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಶಾಲೆಯನ್ನು ಕಣ್ತೆರೆದು ನೋಡಿ, ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕಿದೆ. ಈ ಮೂಲಕ ಸ್ವಾತಂತ್ರ್ಯಪೂರ್ವದ ಸರ್ಕಾರಿ ಶಾಲೆಯನ್ನು ಉಳಿಸಬೇಕಿದೆ.
ಇದನ್ನೂ ಓದಿ: ಒಬ್ಬಿಬ್ಬರು ಓಡಾಡಿದ್ರೂ ತೂಗಾಡುತ್ತಿದೆ ಕಾಫಿನಾಡಿನ ತೂಗುಸೇತುವೆ.. ಅಪಾಯಕ್ಕೂ ಮುನ್ನ ಬೇಕಿದೆ ಕಾಯಕಲ್ಪ