ದಾವಣಗೆರೆ : ಬೆಣ್ಣೆನಗರಿಯನ್ನು ಸಾರ್ಟ್ ಸಿಟಿ ಎಂದು ಘೋಷಣೆಮಾಡಿ ವರ್ಷಗಳೇ ಉರುಳಿತು. ಆದರೆ ಹಳೆ ಪೇಟೆ ಮತ್ತು ಹೊಸ ಪೇಟೆ ನಡುವೆ ಇರುವ ನಗರದ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ನ ಸಮಸ್ಯೆ ಪರಿಹಾರವಾಗಿರಲಿಲ್ಲ. ಈ ಸಮಸ್ಯೆ ದಶಕಗಳಿಂದ ಇದ್ದು ಇದಕ್ಕೆ ಸದ್ಯ ಶಾಶ್ವತ ಪರಿಹಾರ ಮಾಡುವ ಯೋಜನೆ ರೂಪಿಸಲಾಗುತ್ತಿದೆ.
ಹೊಸ ದಾವಣಗೆರೆಗೆ ಮತ್ತು ಹೆಳೆದರ ನಡುವೆ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಇದೆ. ದಿನಕ್ಕೆ ಕಮ್ಮಿ ಎಂದರೂ 40 ರೈಲುಗಳು ಬಂದು ಹೋಗುವುದರಿಂದ ಅರ್ಧ ಗಂಟೆಗೊಮ್ಮೆ ಗೇಟ್ ಬಂದ್ ಮಾಡಬೇಕಾದ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಲ್ಲದೇ ತುರ್ತಾಗಿ ಹೋಗಬೇಕಾದ ಆ್ಯಂಬುಲೆನ್ಸ್, ಶಾಲಾ ವಾಹನಗಳಿಗೂ ಸಮಸ್ಯೆ ಆಗುತ್ತಿದೆ.
ಈ ರೈಲೆ ಹಳಿಯ ಸಮಸ್ಯೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆದಿಯಾಗಿ ಹೋರಾಟ ನಡೆಸಿ, ಜಿಲ್ಲಾಡಳಿತಕ್ಕೆ ಪತ್ರ ಸಹ ಬರೆದಿದ್ದರು. ರೈಲ್ವೆ ಇಲಾಖೆ ಸಚಿವರಾಗಿದ್ದ ಕೆ ಎಚ್ ಮುನಿಯಪ್ಪ, ಬಸನಗೌಡ ಪಾಟೀಲ ಯತ್ನಾಳ್, ಸುರೇಶ್ ಅಂಗಡಿ ಖುದ್ದು ಅಶೋಕ ರೈಲ್ವೆ ಗೇಟ್‌ಗೆ ಭೇಟಿ ನೀಡಿ ಸಮಸ್ಯೆ ಅವಲೋಕಿಸಿದ್ದರು. ಹಾಗೇ ಭರವಸೆಯನ್ನು ನೀಡಿದ್ದರು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.
ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನಿಂದ ರೈಲ್ವೆ ಇಲಾಖೆಗೆ 22 ಲಕ್ಷ ರೂ. ಅನುದಾನ ನೀಡಲಾಗಿತ್ತು. ಕೇಂದ್ರದಲ್ಲಿ ರೈಲ್ವೆ ಇಲಾಖೆ ಸಚಿವರಾಗಿದ್ದ ಡಿ ವಿ ಸದಾನಂದಗೌಡ ಅವರು ಬಜೆಟ್‌ನಲ್ಲಿ 35 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಅದರೂ ಕೂಡ ಕಾಮಾಗಾರಿಗೆ ಮುಹೂರ್ತ ಕೂಡಿಬಂದಿರಲಿಲ್ಲ.
ಈಗ ರೈಲ್ವೆ ಗೇಟ್ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡುವ ಯೋಜನೆ ಮಾಡಲಾಗಿದೆ. ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಸಮಸ್ಯೆಗೆ ಅಂತ್ಯ ಹಾಡಲು ಕೆಲವೇ ದಿನಗಳಲ್ಲಿ ಅಶೋಕ ಚಿತ್ರಮಂದಿರದ ಬಳಿ ಎರಡು ರೈಲ್ವೆ ಕೆಳ ಸೇತುವೆ(ವೆಂಟ್) ನಿರ್ಮಾಣ ಆಗಲಿವೆ. ಹಲವು ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದ ಅನುದಾನ ಸರಿಯಾಗಿ ಬಳಕೆಯಾಗಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಅಲ್ಲದೇ ಅಂಡರ್ ಪಾಸ್ ನಿರ್ಮಾಣ ಆಗುತ್ತಿರುವುದಕ್ಕೂ ಅಪಸ್ವರಗಳು ಕೇಳಿಬರುತ್ತಿವೆ. ಮಳೆಗಾಲದಲ್ಲಿ ನೀರು ತುಂಬುವುದರಿಂದ ವಾಹನ ಸಂಚಾರಕ್ಕೆ ಮತ್ತೆ ಸಮಸ್ಯೆ ಆಗಲಿದೆ. ಫ್ಲೈಓವರ್ ನಿರ್ಮಾಣ ಮಾಡುವುದು ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿದೆ.
ರೈಲುಗಳು ಸಂಚರಿಸುವುದರಿಂದ ಜನ ಹೈರಾಣಾಗಿದ್ದರು. ಇದೀಗ ಅಂಡರ್ ಪಾಸ್ ಆಗುತ್ತಿದೆ. ಆದರೆ ಗುಣಮಟ್ಟದ ಕಾಮಗಾರಿ ಆಗಬೇಕಿದೆ. ಬದಲಾಗಿ 40% ಕಮಿಷನ್ ಕಾಮಗಾರಿ ಆಗಬಾರದು ಎಂದು ಸಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ್ ಇಂಗಳೇಶ್ವರ್ ಆಗ್ರಹಿಸಿದರು.
ಅಂಡರ್ ಬ್ರಿಡ್ಜ್ ಮಾಡಿದರೆ ಅದರಲ್ಲಿ ಮತ್ತೇ ನೀರು ನಿಲ್ಲುವ ಸಮಸ್ಯೆ ಎದುರಾಗುತ್ತದೆ. ಇದನ್ನು ಅವಸರದಲ್ಲಿ ಕಾಮಗಾರಿ ಮಾಡಬಾರದು. ಕೆಳ ಸೇತುವೆ ಮಾಡುವ ಬದಲು ಫ್ಲೈ ಓವರ್ ಮಾಡಬೇಕು ಎಂದ ವಾಹನ ಸವಾರ ಬಸವರಾಜ್, ಕೆಳ ಸೇತುವೆ ಮಾಡಿದಲ್ಲಿ ಸಮಸ್ಯೆ ಕಟ್ಟಿ ಬುತ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ದಾವಣಗೆರೆಯಲ್ಲಿ ಖೋಟಾ ನೋಟು ದಂಧೆ.. ಮನೆ, ದನದ ಕೊಟ್ಟಿಗೆಯಲ್ಲಿ ನಕಲಿ ನೋಟುಗಳು ಪತ್ತೆ