ದಾವಣಗೆರೆ: "ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಹೊರಗಿನವರಿಗೆ ಟಿಕೆಟ್ ಕೊಡಬೇಡಿ. ನೀವೇ ಸ್ಪರ್ಧಿಸಿದರೆ ನಿಮಗೆ ಸಪೋರ್ಟ್ ಮಾಡಿ ಗೆಲ್ಲಿಸುತ್ತೇವೆ. ಆದರೆ ಹೊರಗಿನವರಿಗೆ ಟಿಕೆಟ್ ಕೊಟ್ಟರೆ ನಾವು ಯಾರು ಸಪೋರ್ಟ್ ಮಾಡುವುದಿಲ್ಲ" ಎಂದು ಬಿಜೆಪಿ ಕಾರ್ಯಕರ್ತರು ಇಂದು ಹಾಲಿ ಶಾಸಕ ಎಸ್.ರವೀಂದ್ರನಾಥ್ ಅವರಿಗೆ ಮನವಿ ಮಾಡಿದ್ದಾರೆ.
ದಾವಣಗೆರೆ ತಾಲೂಕಿನ ಶಿರಮಗೊಂಡನ ಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್ ನಿವಾಸದ ಬಳಿ ಜಮಾಯಿಸಿದ ಕಾರ್ಯಕರ್ತರು, ಬೇರೆ ಜಿಲ್ಲೆಯಿಂದ ಬಂದು ಇಲ್ಲಿ ಸ್ಪರ್ಧೆ ಮಾಡುವ ವ್ಯಕ್ತಿಗೆ ಟಿಕೆಟ್ ಕೊಡಬೇಡಿ. ಸ್ಥಳೀಯವಾಗಿ ಲೋಕಿಕೆರೆ ನಾಗರಾಜ್, ಮಾಜಿ ಮೇಯರ್ ಎಸ್.ಟಿ.ವೀರೇಶ್ ಸೇರಿದಂತೆ ಐದಾರು ಜನ ಆಕಾಂಕ್ಷಿಗಳಿದ್ದಾರೆ. ಇಂತಹ ಸ್ಥಳೀಯರಿಗೆ ಟಿಕೆಟ್ ಕೊಡಿ. ಇದರ ಮೇಲಾಗಿ ವಂಶಪಾರಂಪರಿಕ ರಾಜಕೀಯಕ್ಕೆ ಅವಕಾಶ ಕೊಡಬೇಡಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರವೀಂದ್ರನಾಥ್, ಸ್ಥಳೀಯರಿಗೆ ಟಿಕೆಟ್ ನೀಡುವಂತೆ ವರಿಷ್ಠರ ಗಮನಕ್ಕೆ ತರುತ್ತೇನೆ. ಆದರೆ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ ಅವರ ಪರ ನಾನು ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ: ವನ್ಯಜೀವಿ ನೋಡಲು ಬಂದ ತಕ್ಷಣ ಜನ ಮೋದಿಗೆ ಮತ ಒತ್ತಿ ಬಿಡ್ತಾರಾ?: ಹೆಚ್ಡಿಕೆ
ಬಿಜೆಪಿ ಮುಖಂಡ ಶ್ರೀನಿವಾಸ್ ಹೇಳಿಕೆ: ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಶ್ರೀನಿವಾಸ್, ಸ್ಥಳೀಯ ಗ್ರಾ.ಪಂ ಸದಸ್ಯರಿಗೆ ಟಿಕೆಟ್ ಕೊಡಿ. ಅವರ ಗೆಲುವಿಗೆ ಶ್ರಮಿಸುತ್ತೇವೆ. ಸಂಸದ ಸಿದ್ದೇಶ್ವರ್ ಅವರ ತಂದೆಗೆ ಅವಕಾಶ ಮಾಡಿಕೊಟ್ಟಿದ್ದೇವೆ, ಸಿದ್ದೇಶ್ವರ್‌ಗೆ ಅವಕಾಶ ಮಾಡಿಕೊಟ್ಟಿದ್ದೇವೆ, ಇದೀಗ ಇಲ್ಲಿನ ಸ್ಥಳೀಯರಿಗೆ ಅವಕಾಶ ಕಲ್ಪಿಸಿ, ಇಲ್ಲವಾದಲ್ಲಿ ನೀವೇ ಚುನಾವಣೆಗೆ ಸ್ಪರ್ಧೆ ಮಾಡಿ. ನಾವು ಕೆಲಸ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ಆದರೆ ಹೊರಗಿನವರಿಗೆ ಟಿಕೆಟ್ ಕೊಟ್ಟರೆ ನಾವು ಮಾತ್ರ ಅವರ ಪರವಾಗಿ ಕೆಲಸ ಮಾಡಲ್ಲ ಎಂದರು.
ಇದನ್ನೂ ಓದಿ: ಟಿಕೆಟ್ ವಂಚಿತ ಕೈ ನಾಯಕ ಶ್ರೀನಾಥ್ ಮನೆಗೆ ರೆಡ್ಡಿ ಭೇಟಿ: ಒಂದು ಗಂಟೆ ಗೌಪ್ಯ ಚರ್ಚೆ