ದಾವಣಗೆರೆ: ರಾಜ್ಯದಲ್ಲಿ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವು ಜೋರಾಗಿದೆ. ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಮಧ್ಯ ಕರ್ನಾಟಕ ದಾವಣಗೆರೆಯ ಮಹಾನಗರ ಪಾಲಿಕೆಗೂ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಎಲ್ಲಾ ಪಕ್ಷಗಳೂ ಚುನಾವಣೆಗೆ ತಯಾರಿ ನಡೆಸಿವೆ. ಇತ್ತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಚುನಾವಣೆಗೆ ಸಕಲ ಸಿದ್ದತೆ ನಡೆಸಿದೆ.
ಸ್ಮಾರ್ಟ್ ಸಿಟಿ ದಾವಣಗೆರೆ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಸ್ಥಳೀಯ ಮುಖಂಡರಿಗೆ ಟಿಕೆಟ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 45 ವಾರ್ಡಗಳಿದ್ದು ಕಳೆದ ಬಾರಿ ಕಾಂಗ್ರೆಸ್ ಪಾಲಿಕೆ ಚುನಾವಣೆಯಲ್ಲಿ ಅಧಿಪತ್ಯ ಸ್ಥಾಪಿಸಿತ್ತು. ಕಳೆದ ಬಾರಿ ಇದ್ದ 41 ವಾರ್ಡ್ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.
ಮಾದರಿ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಯಲ್ಲಿದ್ದು, ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆಗಾಗಿ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ನಡೆಸಿದೆ. ಚುನಾವಣಾಧಿಕಾರಿಗಳನ್ನ ನೇಮಿಸಿ ಅವರಿಗೆ ಜವಾಬ್ದಾರಿಯನ್ನೂ ಈಗಾಗಲೇ ಜಿಲ್ಲಾಧಿಕಾರಿ ನೀಡಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 3,80,917 ಮತದಾರರಿದ್ದು, ಇದರಲ್ಲಿ 1,90,506 ಪುರುಷ ಮತದಾರರು ಹಾಗೂ 1,90,347 ಮಹಿಳಾ ಮತದಾರರಿದ್ದಾರೆ. ಚುನಾವಣೆಗಾಗಿ ಒಟ್ಟು 377 ಮತಗಟ್ಟೆ ಸ್ಥಾಪಿಸಲಾಗಿದ್ದು ಅದರಲ್ಲಿ 111 ಸೂಕ್ಷ್ಮ, 28 ಅತಿಸೂಕ್ಷ್ಮ ಮತ್ತು 238 ಸಾಮಾನ್ಯ ಮತಗಟ್ಟೆಗಳಿವೆ. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಚುನವಾಣೆಗಾಗಿ ಸೂಕ್ತ ತಯಾರಿ ನಡೆಸಲಾಗಿದೆ ಅಂತಾ ಹೇಳಿದ್ದಾರೆ.
ಮಹಾನಗರ ಪಾಲಿಕೆ ಚುನಾವಣಾ ಘೋಷಣೆಯಾಗಿದ್ದ ಹಿನ್ನೆಲೆ ಎಂಟು ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ. ಬಿಗಿ ಬಂದೋಬಸ್ತ್ ಒದಗಿಸಲಾಗಿದೆ, ಇನ್ನೂ ಕ್ರಿಮಿನಲ್ ಕೇಸ್ ಹಿನ್ನೆಲೆಯುಳ್ಳವರ ಬಗ್ಗೆ ರಿವ್ಯೂ ಮಾಡಿ ಕ್ರಮ ಕೈಗೊಳ್ಳಲು ಸಿದ್ದತೆ ನಡೆದಿದೆ ಎಂದು ತಿಳಿಸಿದ್ದಾರೆ.