ದಾವಣಗೆರೆ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರು ನಾಯಕರು ಈಗಿನಿಂದಲೇ ಟಿಕೆಟ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಬೆಳವಣಿಗೆ ದಾವಣಗೆರೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಕೆಲವು ದಿನಗಳ ಹಿಂದೆ ಬಿಜೆಪಿ ಸೋಲಿನ ಕಾರಣಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಲೋಕಸಭಾ ಚುನಾವಣೆಗೆ ತಾನು ಪ್ರಬಲ ಆಕಾಂಕ್ಷಿ ಎಂದು ಘೋಷಣೆ ಮಾಡಿ, ಸಿದ್ದೇಶ್ವರ್ ವಿರುದ್ಧ ಸೆಡ್ಡು ಹೊಡೆದು ಬಿಜೆಪಿಗೆ ಸಂದೇಶ ರವಾನಿಸಿದ್ದಾರೆ.
ಕೇಂದ್ರ ಸರ್ಕಾರ ಸರ್ವೇ ಮಾಡಿ ನನಗೆ ಟಿಕೆಟ್ ಕೊಡಲಿ ಎಂದು ಆಗ್ರಹಿಸಿದ್ದಲ್ಲದೇ ದಾವಣಗೆರೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಖುದ್ದು ಯಡಿಯೂರಪ್ಪನವರೇ ನನಗೆ ಸೂಚಿಸಿದ್ದಾರೆ ಎಂದು ಮಾತಿನ ಮೂಲಕ ಬಾಣ ಬಿಟ್ಟಿದ್ದಾರೆ. ಇತ್ತೀಚೆಗೆ ಸಿದ್ದೇಶ್ವರ್ ಅವರಿಗೆ ರೇಣುಕಾಚಾರ್ಯ, ನಾನು ಲೋಕಸಭಾ ಚುನಾವಣೆಗೆ ಸಿದ್ಧ ಎಂದು ಬಹಿರಂಗವಾಗಿ ಹೇಳುವುದೊಂದಿಗೆ ಟಾಂಗ್ ಕೊಟ್ಟಿದ್ದರು.
ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ ಮಾತನಾಡಿದ್ದ, ಸ್ಪರ್ಧೆ ಮಾಡ್ಬೇಕೆಂದು ಜಿಲ್ಲಾದಂತ್ಯ ಜನ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದಲೂ ಒತ್ತಡ ಇದೆ. ನಾನು ನೂರಕ್ಕೆ ನೂರರಷ್ಟು ಪ್ರಬಲ ಆಕಾಂಕ್ಷಿ. ಪಕ್ಷ ತೀರ್ಮಾನಕ್ಕೆ ತಲೆ ಬಾಗ್ತಿನಿ ಎಂದು ತಿಳಿಸಿದ್ದರು.
ಸಂಸದ ಜಿಎಂ ಸಿದ್ದೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಾರಿ ಚುನಾವಣೆ ಸ್ಪರ್ಧೆ ಮಾಡಿದಾಗ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದು ಸತ್ಯ. ನಾನು ಆರೋಗ್ಯವಾಗಿ ಚೆನ್ನಾಗಿದ್ದೇನೆ. ನನಗೀಗ 71 ವರ್ಷ. ಪಕ್ಷ ಟಿಕೆಟ್ ಕೊಟ್ರೆ ನಿಲ್ಲುವೆ, ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪನವರು ನೀನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಮೊನ್ನೆ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಸಂಗೀತ ಬಳಕೆ; ಎಫ್ಐಆರ್ ವಜಾ ಕೋರಿದ ಕಾಂಗ್ರೆಸ್ ಅರ್ಜಿ ತಿರಸ್ಕೃತ