ದಾವಣಗೆರೆ: ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಜಿಲ್ಲೆಯ ರೈತರು ಹಾಕಿದ ಬೆಳೆ ನೆಲ ಕಚ್ಚಿದೆ. ಇದರಿಂದ ಆರ್ಥಿಕ ಹೊಡೆತ ಬಿದ್ದಿದ್ದು, ಸರ್ಕಾರ ತಮ್ಮ ಆಸರೆಗೆ ಧಾವಿಸಲಿ ಎಂದು ರೈತಾಪಿ ವರ್ಗ ಆಗ್ರಹಿಸಿದೆ. ಹೌದು. ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ, ನವಣೆ, ಸಜ್ಜೆ, ರಾಗಿ, ಭತ್ತ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚುವ ಹಂತ ತಲುಪಿವೆ. ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿಸುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಇದರಿಂದ ರೈತರು ಮಳೆ ಇಲ್ಲದೇ ಹೈರಾಣಾಗಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಸಾಲಸೋಲ ಮಾಡಿ ಹಾಕಿದ ಬೆಳೆ ಕೈಗೆ ಬಾರದೇ ಇರುವುದರಿಂದ ಅನ್ನದಾತ ಪರಿಹಾರಕ್ಕಾಗಿ ಸರ್ಕಾರದ ಕದ ತಟ್ಟಿದ್ದಾನೆ. ಆದರೆ, ಸರ್ಕಾರ ಮಾತ್ರ ಬರ ಜಿಲ್ಲೆ ಎಂದು ಘೋಷಿಸಲು ಮೀನಮೇಷ ಎಣಿಸುತ್ತಿದೆ. ಸರ್ಕಾರದ ಈ ನಡೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಗಳೂರನ್ನು 'ಬರ ಪೀಡಿತ' ತಾಲೂಕು ಎಂದು ಘೋಷಿಸುವಂತೆ ಆಗ್ರಹ: ದಾವಣಗೆರೆ, ವಿಜಯನಗರ ಹಾಗೂ ಹರಪನಹಳ್ಳಿ ಸೇರಿ ಒಟ್ಟು ಏಳು ತಾಲೂಕುಗಳಲ್ಲಿ ಮುಂಗಾರ ಮಳೆ ಕೊರತೆಯುಂಟಾಗಿದೆ. ಇದರಿಂದ ಇಡೀ ಜಿಲ್ಲೆಯ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 1.85 ಲಕ್ಷ ಹೆಕ್ಟೇರ್ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಅದನ್ನು ಹೊರತುಪಡಿಸಿ 1.63 ಲಕ್ಷ ಹೆಕ್ಟೇರ್ನಲ್ಲಿ ಒಟ್ಟು 1.27 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಉಳಿದ 0.33 ಸಾವಿರ ಹೆಕ್ಟೇರ್ನಲ್ಲಿ ಇತರೆ ಬೆಳೆಗಳನ್ನು ಬೆಳೆದಿದ್ದಾರೆ. 1.63 ಲಕ್ಷ ಹೆಕ್ಟೇರಲ್ಲಿ ಬಿತ್ತನೆಯಾಗಿರುವ ಸಂಪೂರ್ಣ ಬೆಳೆ ಸಕಾಲದಲ್ಲಿ ಮುಂಗಾರು ಮಳೆಯಿಲ್ಲದೇ ಬಾಡಿ ಹೋಗಿದೆ. ಬೆಳೆ ಬೆಳೆಯಲು ಪ್ರತಿ ಎಕರೆಗೆ 20 ಸಾವಿರ ರೂ. ಖರ್ಚು ಮಾಡಿದ್ದು, ಇದೀಗ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಅಲ್ಲದೇ ಜಿಲ್ಲೆಯ ಜಗಳೂರನ್ನು 'ಬರ ಪೀಡಿತ' ತಾಲೂಕು ಎಂದು ಘೋಷಿಸುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಶಾಸಕರು ಹೇಳಿದ್ದೇನು?: "ಈಗಾಗಲೇ ಬರದ ಸರ್ವೇ ನಡೆಯುತ್ತಿದೆ. ಎರಡು ದಿಗಳಲ್ಲಿ ಎಲ್ಲಾ ಸರ್ವೇ ಮುಗಿಯಲಿದೆ. ಬರವಣಿಗೆ ಮೂಲಕ ಸರ್ಕಾರಕ್ಕೆ ವರದಿ ಕೊಡಬೇಕಾಗಿದೆ. ಇದರ ಬಗ್ಗೆ ಸರ್ಕಾರದ ಬೆಳಕು ಚೆಲ್ಲಿ ಅನ್ಯಾಯ ಆಗಿರುವ ರೈತನಿಗೆ ಯಾವ ರೀತಿ ಸಹಾಯ ಮಾಡಬಹುದಾಗಿದೆ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ. ಇದು ಒಳ್ಳೆ ಮುಂಗಾರು ಹಂಗಾಮಿನ ಕಾಲ. ರೈತರು ಬೋರ್ವೆಲ್ ಅವಲಂಬಿಸದೇ ಮಳೆಯಲ್ಲಿ ಬೆಳೆ ಬೆಳೆಯುವ ಸಮಯ. ಆದರೆ, ಬರಗಾಲ ಆವರಿಸಿರುವುದರಿಂದ ರೈತರು ಬೋರ್ವೆಲ್ ಅವಲಂಬಿಸುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಆಗ್ತಿದೆ. ಕೆಲ ಕೆಲಸ ಆಗುತ್ತಿರುವುದರಿಂದ ಎಲ್ಲಾ ರೈತರಿಗೆ ವಿದ್ಯುತ್ ದೊರಕಲಿದೆ"- ಜಗಳೂರು ಶಾಸಕ ದೇವೇಂದ್ರಪ್ಪ.
ರೈತರು ಹೇಳುವುದೇನು?: "ಮೆಕ್ಕೆಜೋಳ, ರಾಗಿ, ಸಜ್ಜೆ, ಶೇಂಗಾ, ನವಣೆ ಮುಂತಾದ ಬೆಳೆ ಬೆಳೆಯುವ ತಾಲೂಕು ನಮ್ಮದು. ಬರ ಪೀಡಿರ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡರು ಸರ್ಕಾರ ಮಾತ್ರ ಬರ ಪಟ್ಟಿಗೆ ಸೇರಿಸಿಲ್ಲ. ಕೆಲ ಕೃಷಿಕರು ಕೃಷಿ ಬಿಟ್ಟು ಬೆಂಗಳೂರು ಕಡೆ ಗುಳೆ ಹೋಗುತ್ತಿದ್ದಾರೆ. ಬೆಳೆ ಬೆಳೆಯಲು ಮಾಡಿದ ಸಾಲದ ಹೊರೆ ಹೆಚ್ಚಾಗಿದೆ. ಇನ್ನು ಬೋರ್ವೆಲ್ ಮೂಲಕ ನೀರು ಹರಿಸಿ ಬೆಳೆ ಬೆಳೆಯಲು ಮುಂದಾದರೆ ವಿದ್ಯುತ್ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಇದರಿಂದ ರೈತರು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ"- ಚಿರಂಜೀವಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ.
ಇದನ್ನೂ ಓದಿ: ತುಮಕೂರು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸಚಿವ ಡಾ.ಜಿ ಪರಮೇಶ್ವರ ಮನವಿ