ದಾವಣಗೆರೆ: ರೋಗಿಗಳಿಗೆ ಚುಚ್ಚು ಮದ್ದು ನೀಡಿ ಜೀವ ಉಳಿಸುವ ವೈದ್ಯನೊಬ್ಬ ತನ್ನ ಮಡದಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವ ಘಟನೆ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ನಡೆದಿದೆ.
ಶಿಲ್ಪಾ(36)ಳನ್ನು ಚನ್ನಕೇಶಪ್ಪ (45) ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಒಂಬತ್ತು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾಳ ಕೊಲೆ ಪ್ರಕರಣವನ್ನು ಪೋಲಿಸರು ಭೇದಿಸಿದ್ದು, ಡಾ, ಚನ್ನಕೇಶಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 2005 ರಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಶಿಲ್ಪಾರೊಂದಿಗೆ ಚನ್ನಕೇಶಪ್ಪ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ವಾಮಾಚಾರದಲ್ಲಿ ತೊಡಗಿದ್ನಾ ವೈದ್ಯ?
ಚನ್ನಕೇಶಪ್ಪ ವಾಮಾಚಾರದಲ್ಲಿ ತೊಡಗಿದ್ದ ಎನ್ನಲಾಗಿದೆ. ಫೆಬ್ರವರಿ 11 ರಂದು ಶಿಲ್ಪಾಗೆ ಬಿಪಿ ಲೋ ಆಗಿತ್ತಂತೆ. ಈ ವೇಳೆ ಚನ್ನಕೇಶಪ್ಪ ಡೆಕ್ಸಮೆಥಾಸೊನ್ ಸ್ಟೀರಾಯ್ಡ್ ನೀಡಿದ್ದಾನೆ. ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾಳೆ.
ಈ ವೇಳೆ ಆರೋಪಿಯು, ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದೆ, ಮನೆಗೆ ತಂದಿದ್ದನಂತೆ. ಈ ಸಮಯದಲ್ಲಿ ಆಕೆಯ ಬಾಯಲ್ಲಿ ರಕ್ತ ಮಿಶ್ರಿತ ನೊರೆ ಬಂದಿದೆ. ಇದರಿಂದ ಅನುಮಾನಗೊಂಡ ಪೋಷಕರು ನ್ಯಾಮತಿ ಠಾಣೆಗೆ ದೂರು ನೀಡಿದ್ದರು.
ಎಸ್ಎಸ್ಎಲ್ ತನಿಖೆ ವರದಿಯಿಂದ ಪ್ರಕರಣ ಬೆಳಕಿಗೆ
ಶಿಲ್ಪಾಳ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಎಸ್ಎಸ್ಎಲ್ ತನಿಖಾ ವರದಿ ಎರಡೂ ಹೊಂದಿಕೆಯಾದ ಹಿನ್ನೆಲೆ, ಪೊಲೀಸರು ಡಾ.ಚನ್ನಕೇಶಪ್ಪನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಆರೋಪಿ ಚನ್ನಕೇಶಪ್ಪ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ಕೊಲೆಗೆ ಕಾರಣ ಪತ್ತೆ ಹಚ್ಚುತ್ತಿದ್ದಾರೆ.
ಇದನ್ನೂ ಓದಿ:ಜೈಲಿನಿಂದಲೇ ಉದ್ಯಮಿಗಳಿಗೆ ಬೆದರಿಕೆ ಕರೆ ಪ್ರಕರಣ: ಶಂಕಿತ ಉಗ್ರನ ಹೆಂಡತಿ ಸೆರೆ