ದಾವಣಗೆರೆ:ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ ಮಾಡಿದ ಧರ್ಮಶಾಲೆಯಲ್ಲಿ ವಿವಾಹವಾಗಲು ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ಲಕ್ಷಗಟ್ಟಲೆ ಮದುವೆಗಳು ಉಚಿತವಾಗಿ ನಡೆದಿರುವ ಈ ಕಲ್ಯಾಣಮಮಟಪ ಮದುವೆ ಮಾಡಲು ಬಾಡಿಗೆ ಹಣ ಪಡೆಯದೆ ಇರುವ ಏಕೈಕ ಧರ್ಮಶಾಲಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿ ರಾಜನಹಳ್ಳಿ ಹನುಮಂತಪ್ಪನವರು ಹಾಗೂ ಅವರ ವಂಶಸ್ಥರು ನಿರ್ಮಾಣ ಮಾಡಿದ ಸುಂದರವಾದ ಧರ್ಮಶಾಲಾಗಳು ಬಡವರಿಗೆ ಹಾಗು ಮಧ್ಯಮ ವರ್ಗದ ಜನರಿಗೆ ಮದುವೆಗಳನ್ನು ಉಚಿತವಾಗಿ ಮಾಡಲು ನೆರವಾಗಿದೆ. ಇದನ್ನು ಸ್ವಚ್ಛವಾಗಿಡಲು ಶ್ರಮಿಸುವ ಕೂಲಿ ಕಾರ್ಮಿಕರಿಗೆ ಹಾಗೂ ವಿದ್ಯುತ್ ಬಿಲ್ ಸೇರಿದ್ದಂತೆ ಏನಾದರೂ ಹಾನಿ ಮಾಡಿದರೆ ಅದರ ಬಿಲ್ ಮಾತ್ರ ಪಡೆದುಕೊಳ್ಳುತ್ತಿರುವುದು ಬಿಟ್ರೆ, ಮದುವೆ ಮಾಡಲು ಇಲ್ಲಿ ಹಣ ಪಡೆದಿರುವುದು ದೂರದ ಮಾತು.1942 ರಿಂದ ಹಿಡಿದು 2021 ರ ತನಕ ಬಾಡಿಗೆ ಪಡೆಯದೇ ರಾಜನಹಳ್ಳಿ ಧರ್ಮಶಾಲೆಯನ್ನು ಮದುವೆಗಳಿಗೆಂದು ನೀಡಲಾಗ್ತಿದೆ.
ಮೂರು ಧರ್ಮಶಾಲಾಗಳಲ್ಲಿ 15 ಲಕ್ಷ ಮದುವೆ....!
1942 ಹಾಗು 1982 ಸೇರಿದ್ದಂತೆ 2019 ರಲ್ಲಿ ಹಂತಹಂತವಾಗಿ ನಿರ್ಮಾಣ ಆದಾ ರಾಜನಹಳ್ಳಿ ಹನುಮಂತಪ್ಪನವರ ವಂಶಸ್ಥರ ಈ ಮೂರು ಧರ್ಮಶಾಲಾಗಳಲ್ಲಿ ಇಲ್ಲಿ ತನಕ ಸುಮಾರು 15 ಲಕ್ಷಕ್ಕೂ ಅಧಿಕ ಮದುವೆಗಳು ಉಚಿತವಾಗಿ ನೆರವೇರಿವೆಯಂತೆ. ದಾವಣಗೆರೆಯ ಹೃದಯ ಭಾಗದಲ್ಲಿರುವ ಈ ಮೂರು ಧರ್ಮಶಾಲಾಗಳನ್ನು ಇಂದಿಗೂ ರಾಜನಹಳ್ಳಿ ಕುಟುಂಬ ನಿರ್ವಹಿಸುತ್ತಿದೆ.
ರಾಜನಹಳ್ಳಿ ಹನುಮಂತಪ್ಪ ಅವರ ಧರ್ಮಶಾಲಾಗಳ ಇತಿಹಾಸ:
ರಾಜನಹಳ್ಳಿ ಹನುಮಂತಪ್ಪ 1942 ಜುಲೈ 15 ರಂದು ನಿರ್ಮಾಣ ಮಾಡಿದ ಧರ್ಮಶಾಲಾವನ್ನು ಮೈಸೂರಿನ ರಾಜರಾದ ಜಯಚಾಮರಾಜೇಂದ್ರ ಒಡೆಯರು ಉದ್ಘಾಟನೆ ಮಾಡಿದ್ರು. ಆ ಮೂಲಕ ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲಾ ಎಂದು ಅದಕ್ಕೆ ನಾಮಕರಣ ಮಾಡಿದರು. ಈ ರಾಜನಹಳ್ಳಿ ಹನುಮಂತಪ್ಪನವರ ಧರ್ಮಶಾಲಾದ ಪಕ್ಕದಲೇ ಇರುವ ಮತ್ತೊಂದು ಧರ್ಮಶಾಲೆಯನ್ನು ಹನುಂತಪ್ಪನವರ ಮಗನಾದ ರಾಮಶೆಟ್ಟಿಯವರು 1982 ರಲ್ಲಿ ನಿರ್ಮಾಣ ಮಾಡಿದ್ದು, ಅದರ ಪಕ್ಕದಲ್ಲಿ ಕಳೆದ 2019ರಲ್ಲಿ ರಾಮಶೆಟ್ಟಿಯವರ ಮಕ್ಕಳು ಹಾಗು ಮೊಮ್ಮಕ್ಕಳು ಸೇರಿ ಶ್ರೀನಿವಾಸ ಮೂರ್ತಿಯರ ಹೆಸರಿನ ಮೇಲೆ ಮತ್ತೊಂದು ಧರ್ಮಶಾಲಾ ನಿರ್ಮಾಣ ಮಾಡಿ ಬಡವರಿಗೆ ಆಸರೆಯಾಗಿದ್ದಾರೆ.