ದಾವಣಗೆರೆ: ಜಿಲ್ಲೆಯಲ್ಲಿ ಈವರೆಗೆ ಕೋವಿಡ್ -19 ಖಚಿತಪಟ್ಟ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಅವರು, ಇದುವರೆಗೆ ಅವಲೋಕನೆಗಾಗಿ ಒಟ್ಟು 78 ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಒಬ್ಬರು ಮಾತ್ರ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 14 ದಿನದ ಅವಲೋಕನಕ್ಕೆ ಒಟ್ಟು 68 ಮಂದಿ ಒಳಗಾಗಿದ್ದಾರೆ. ಇಬ್ಬರಿಗೆ ಮಾತ್ರ ಮನೆಯಲ್ಲೇ ಅವಲೋಕನ ಮಾಡಲಾಗುತ್ತಿದೆ. ಐದು ಶಂಕಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ನೆಗಟಿವ್ ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಹರಪನಹಳ್ಳಿ ತಾಲೂಕಿನ ಗ್ರಾಮವೊಂದರ ಯುವಕನ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬಂದಿದ್ದು ಇದು ನೆಗೆಟಿವ್ ಇದ್ದೆ. ಹಾಗಾಗಿ ಆತಂಕ ಪಡುವ ಅಗತ್ಯ ಇಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಜಿಲ್ಲೆಯ ಜನತೆಗೆ ಅಭಯ ನೀಡಿದ್ದಾರೆ.
ಕೊರೊನೊ, ಹಕ್ಕಿಜ್ವರ ಬಗ್ಗೆ ಈಶ್ವರಪ್ಪ ಸಭೆ: ಜಿಲ್ಲೆಯಲ್ಲಿ ಕೊರೊನೊ ಹಾಗೂ ಹಕ್ಕಿಜ್ವರ ದೃಢಪಟ್ಟ ಪ್ರಕರಣದ ಕುರಿತಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಸಭೆ ನಡೆಸಲಿದ್ದು, ಅಧಿಕಾರಿಗಳಿಂದ ಕೊರೊನೊ ಹಾಗೂ ಹಕ್ಕಿಜ್ವರದ ಬಗ್ಗೆ ತೆಗೆದುಕೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.