ದಾವಣಗೆರೆ: ವ್ಯಾಲೆಂಟೈನ್ಸ್ ಡೇ ದಿನದಂದು ಪ್ರೇಮ ನಿವೇದನೆ ಮಾಡಿಕೊಂಡು ಮನದಾಳದಲ್ಲಿ ಹುದುಗಿದ್ದ ಪ್ರೀತಿ ಹೇಳಿಕೊಳ್ಳುವವರೇ ಹೆಚ್ಚು. ಆದ್ರೆ, ಪ್ರೇಮಿಗಳ ದಿನದಂದು ಲವ್ ಮಾಡಿ ಮದುವೆ ಆಗೋರು ತೀರಾ ಕಡಿಮೆ. ದಾವಣಗೆರೆ ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಸಿ. ಆಶ್ವತಿ ವ್ಯಾಲೆಂಟೈನ್ಸ್ ಡೇ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೇರಳದ ಕ್ಯಾಲಿಕಟ್ನ ಕೋಯಿಕ್ಕೋಡ್ನ ಟಾಗೋರ್ ಹಾಲ್ನಲ್ಲಿ ಕೇರಳ ಸಂಪ್ರದಾಯದಂತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ ಈ ಜೋಡಿ. ಕೇರಳದ ಪ್ರಸಿದ್ಧ ಉಡುಪು ಕಾಂಚಿಪುರಂ ರೇಷ್ಮೆ ಸೀರೆ ಮತ್ತು ಕೆಂಪು ಬಣ್ಣದ ಬ್ಲೌಸ್, ಬಂಗಾರದ ಒಡವೆಗಳನ್ನ ಧರಿಸಿ ಅಶ್ವತಿ ಮಿರ ಮಿರ ಮಿಂಚಿದರೆ, ಡಿಸಿ ಗೌತಮ್ ಬಗಾದಿ ಬಿಳಿ ಪಂಚೆ, ಬಿಳಿ ಅಂಗಿ, ಶಾಲು ತೊಟ್ಟು ಮಿನುಗಿದರು.
ಸಿಂಪಲ್ ಆಗಿ ನಡೀತು ವಿವಾಹ:
ದಾವಣಗೆರೆ ಜಿಲ್ಲೆಯಲ್ಲಿ ಖಡಕ್ ಐಎಎಸ್ ಅಧಿಕಾರಿಗಳೆಂದೇ ಫೇಮಸ್ ಆಗಿದ್ದ ಗೌತಮ್ ಬಗಾದಿ ಮತ್ತು ಅಶ್ವತಿ ಸಿಂಪಲ್ ಆಗಿ ಮದುವೆಯಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಟಾಗೋರ್ ಹಾಲ್ನಲ್ಲಿ ನಡೆದ ಈ ವಿವಾಹಕ್ಕೆ ಉಭಯ ಕುಟುಂಬಗಳ ಆಪ್ತರು, ಸ್ನೇಹಿತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಇವರ ಸಮ್ಮುಖದಲ್ಲಿ ಗೌತಮ್ ಬಗಾದಿ ಅವರು ಅಶ್ವತಿ ಅವರಿಗೆ ತಾಳಿ ಕಟ್ಟುವ ಮೂಲಕ ಸಪ್ತಪದಿ ತುಳಿದರು.
ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಲು ಇಬ್ಬರು ನಿರ್ಧರಿಸಿದ್ದರು. ಆದ್ರೆ, ಕುಟುಂಬಸ್ಥರ ಒತ್ತಾಯದ ಮೇರೆಗೆ ಸ್ನೇಹಿತರು, ಕುಟುಂಬದ ಆಪ್ತರಿಗೆಲ್ಲಾ ಆಹ್ವಾನ ನೀಡಿದ್ದರು. ಯಾವುದೇ ವೈಭೋಗ ಇಲ್ಲದೇ ಸಭಾಂಗಣದಲ್ಲಿ ಮದುವೆ ಸಿಂಪಲ್ ಆಗಿ ನೆರವೇರಿತು.
ದಾವಣಗೆರೆ ಜಿಲ್ಲೆಯಿಂದ ಸುಮಾರು 150 ಮಂದಿ, ರಾಯಚೂರಿನಿಂದ ಕೆಲವರು ಈ ಮದುವೆಗೆ ಸಾಕ್ಷಿಯಾದ್ರೆ, ಬಗಾದಿ ಮತ್ತು ಅಶ್ವತಿ ತಮ್ಮ ಸ್ನೇಹಿತರು, ಆಪ್ತರು, ಹಿರಿಯ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದರು.
ಫೆ. 17 ಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆರತಕ್ಷತೆ:
ಡಿಸಿ ಗೌತಮ್ ಬಗಾದಿಯವರ ಸ್ವಂತ ಊರಾದ ಆಂಧ್ರಪ್ರದೇಶದ ವಿಶಾಖಪಟ್ಟಣದ ದಿ ಪಾರ್ಕ್ ಹೊಟೇಲ್ನಲ್ಲಿ ಫೆಬ್ರವರಿ 17 ರಂದು ಆರತಕ್ಷತೆ ನಡೆಯಲಿದೆ. ಬಗಾದಿ ಅವರು 2009ನೇ ಐಎಎಸ್ ಬ್ಯಾಚ್ನ ಹಿರಿಯ ಅಧಿಕಾರಿಯಾದ್ರೆ, ಸಿ. ಅಶ್ವತಿ 2013 ನೇ ಬ್ಯಾಚ್ನ ಐಎಎಸ್ ಅಧಿಕಾರಿ. ಇವರಿಬ್ಬರ ನಡುವಿನ ನಾಲ್ಕು ವರ್ಷಗಳ ಪ್ರೀತಿ ಈಗ ಮದುವೆ ಮೂಲಕ ಸಾಕಾರಗೊಂಡಿದೆ.
ವಿಶಾಖಪಟ್ಟಣದ ಕೃಷ್ಣರಾವ್- ಪಾರ್ವತಿ ದಂಪತಿ ಪುತ್ರ ಗೌತಮ್ ಮತ್ತು ಕ್ಯಾಲಿಕಟ್ನ ಹಿರಿಯ ವಕೀಲರಾದ ಸೆಲ್ವಿರಾಜ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಪುಷ್ಪಾ ಅವರ ಪುತ್ರಿ ಅಶ್ವತಿ ಮದುವೆಗೆ ಎರಡು ಕುಟುಂಬದವರೂ ಒಪ್ಪಿಗೆ ನೀಡಿದ್ದಾರೆ.
ಇವರ ನಡುವೆ ನಾಲ್ಕು ವರ್ಷದ ಹಿಂದೆಯೇ ಪ್ರೇಮಾಂಕುರವಾಗಿದ್ದರೂ ಇದು ಗೊತ್ತಾಗಿದ್ದು ಇದೇ ತಿಂಗಳ ಫೆಬ್ರವರಿ 1 ರಂದು. ಇಬ್ಬರದ್ದು ಬೇರೆ ಬೇರೆ ರಾಜ್ಯಗಳಾದರೂ ಪ್ರೀತಿಗೆ ರಾಜ್ಯದ, ಭಾಷೆಯ ಗಡಿ ಇಲ್ಲ ಎಂಬುದಕ್ಕೆ ಡಿಸಿ ಮತ್ತು ಸಿಇಒ ಪ್ರೀತಿ ಸಾಕ್ಷಿಯಂತಿದೆ.