ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಸ್ಮಾರ್ಟ್ ಆಗುವ ಜೊತೆಗೆ ಸಮಸ್ಯೆಗಳು ಸೃಷ್ಟಿಯಾಗಿವೆಯೆಂದು ಆಟೋ ಚಾಲಕರು ಆರೋಪಿಸುವ ವಾತಾವರಣ ನಿರ್ಮಾಣವಾಗಿದೆ.
ಹೌದು, ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆಗಿಳಿದಿದ್ದ ಎಲೆಕ್ಟ್ರಿಕಲ್ ಆಟೋಗಳು ಸಂಪೂರ್ಣ ಕಳಪೆ ಎಂದು ಚಾಲಕರಿಂದ ಸಾಬೀತಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳ ಒತ್ತಾಯದ ಮೇರೆಗೆ ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ ಆಟೋ ಮಾಲೀಕರು ತೆಗೆದುಕೊಂಡಿದ್ದ ಆಟೋಗಳು, ಚಲಿಸುವ ವೇಳೆ ಪಲ್ಟಿಯಾಗಿರುವ ಮತ್ತು ಒಂದಿಷ್ಟು ಸಮಸ್ಯೆ ಎದುರಾಗಿರುವ ಉದಾಹರಣೆಗಳಿವೆ. ಈ ಹಿನ್ನೆಲೆ ಈ ಎಲೆಕ್ಟ್ರಿಕಲ್ ಆಟೋಗಳ ಸಹವಾಸವೇ ಬೇಡ ಎನ್ನುತ್ತಿದ್ದಾರೆ ಆಟೋ ಚಾಲಕರು.
ಒಂದೆಡೆ ಆಟೋ ವಾಲುವ ಮೂಲಕ ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ. ಇನ್ನೊಂದೆಡೆ ಈ ಆಟೋಗಳಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಬೆಳೆಸಬೇಕಾದ ಸಮಸ್ಯೆ ಎದುರಾಗಿದೆ. ಸಾಕಷ್ಟು ಕಡೆಗಳಲ್ಲಿ ಈ ಆಟೋಗಳು ಅಪಘಾತಕ್ಕೆ ತುತ್ತಾಗಿದ್ದರಿಂದ ಇದರ ಬಗ್ಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಚಾಲಕರು ಸ್ಮಾರ್ಟ್ ಸಿಟಿ ಕಚೇರಿಗೆ ಭೇಟಿ ನೀಡಿದ್ರೆ, ಶೋ ರೂಮ್ ಗೆ ಹೋಗಿ ಎಂದು ಅಧಿಕಾರಿಗಳು ಹೇಳ್ತಾರಂತೆ. ಇತ್ತ ಶೋ ರೂಮ್‌ನವರು ಅಧಿಕಾರಿಗಳನ್ನು ಕಾಣಿ ಎಂದು ಹೇಳುತ್ತಿದ್ದು. ಚಾಲಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: 'ರಕ್ಷಿತಾ'- ಬೈಕ್ ಆ್ಯಂಬುಲೆನ್ಸ್ಗೆ ಚಾಲನೆ; ಭದ್ರತಾ ಸಿಬ್ಬಂದಿಗೆ ಸಹಾಯ ಹಸ್ತ
ಸ್ಮಾರ್ಟ್ ಸಿಟಿ ಯೋಜನೆಯ ಎಂಡಿ ರವೀಂದ್ರನಾಥ್ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾದರೂ ಕೂಡ ಸಮಸ್ಯೆ ಹಾಗೆಯೇ ಕಗ್ಗಂಟಾಗಿದೆ. ಪುಣೆ ಮೂಲದ ಈ ಎಲೆಕ್ಟ್ರಿಕಲ್ ಎಂಬ ಹೆಸರಿನ ಆಟೋ ಕಂಪನಿ ಇದಾಗಿದ್ದು, ಕಂಪನಿಗೆ ಐದಾರು ಬಾರಿ ಎಂಡಿಯವರು ಸಮಸ್ಯೆ ಬಗೆಹರಿಸುವಂತೆ ಕಂಪನಿಗೆ ಪತ್ರಗಳನ್ನು ಬರೆದಿದ್ದಾರೆ. ಆದ್ರೆ ಈ ಎಲೆಕ್ಟ್ರಿಕಲ್ ಎಂಬ ಹೆಸರಿನ ಆಟೋ ಕಂಪನಿ ಯಾವುದೇ ಉತ್ತರ ನೀಡದಿರುವುದರಿಂದ ಎಂಡಿ ಅವರು ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಒಟ್ಟಾರೆ ಆಟೋ ಖರೀದಿ ಮಾಡಿದ ಚಾಲಕರು ಹಾಗೂ ಮಾಲೀಕರು ಆಟೋ ಓಡಿಸದೇ ಅದನ್ನು ಮೂಲೆಗೆ ತಳ್ಳಿದ್ದಾರೆ. ಆಟೋಗಳನ್ನು ಲೋನ್‌ಮೇಲೆ ತೆಗೆದುಕೊಂಡಿದ್ದು, ಇದೀಗ ಮಾಲೀಕರಿಗೆ ಸಾಲ ಕಟ್ಟುವಂತೆ ಬ್ಯಾಂಕ್ ಗಳು ನೋಟಿಸ್ ನೀಡುತ್ತಿರುವುದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದಂತಾಗಿದೆ.