ದಾವಣಗೆರೆ: ಆತ ಕೇರಳ ಮೂಲದ ತೈಲ ವ್ಯಾಪಾರಿ. ದುಬೈನಲ್ಲಿ ತೈಲ ವ್ಯಾಪಾರ ಮಾಡುವುದರೊಂದಿಗೆ ತನ್ನೂರಿನಲ್ಲಿ ಏನಾದ್ರೂ ಒಂದು ವ್ಯಾಪಾರ ಮಾಡಬೇಕು ಎಂದುಕೊಂಡು ಕನಸು ಕಂಡಿದ್ದರು. ತೈಲ ವ್ಯಾಪಾರದಿಂದ ಬಂದ ಹಣ ಸಂಗ್ರಹಿಸಿ, ತನ್ನೂರಿನ ಉದ್ಯಮ ಆರಂಭಿಸಲು ಲಕ್ಷಾಂತರ ರೂಪಾಯಿಯನ್ನು ಆಪ್ತರಿಬ್ಬರ ಕೈಯಲ್ಲಿ ಕಳುಹಿಸಿದ್ದರು. ಆದ್ರೆ ಕೇರಳಕ್ಕೆ ಕೊಂಡೊಯ್ಯುತ್ತಿದ್ದ ಹಣದ ಬಗ್ಗೆ ಡಕಾಯಿತರಿಗೆ ಗೊತ್ತಾಗಿದೆ. ಪ್ಲಾನ್ ಮಾಡಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ.
95 ಲಕ್ಷ ರೂ.ಗಳನ್ನು ಸಿನಿಮೀಯ ರೀತಿ ಗನ್ ತೋರಿಸಿ ದರೋಡೆಕೋರರು ದರೋಡೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಬೀರೂರು ರಾಜ್ಯ ಹೆದ್ದಾರಿಯಲ್ಲಿನ ಬುಕ್ಕಾಂಬುದಿ ಕೆರೆ ಬಳಿ ನಡೆದಿದೆ. ಈ ಪ್ರಕರಣ ಇಡೀ ಜಿಲ್ಲೆಯ ಜನರಿಗೆ ಭಯ ಹುಟ್ಟಿಸಿದೆ. ದುಬೈನಲ್ಲಿ ತೈಲ ವ್ಯಾಪಾರ ಮಾಡುತ್ತಿದ್ದ ನಬೀಲ್ಕೆ ಎನ್ನುವವರು ಹಣ ಕಳೆದುಕೊಂಡ ತೈಲ ವ್ಯಾಪಾರಿ. ತೈಲ ವ್ಯಾಪಾರಿ ನಬೀಲ್ಕೆ ಅವರು, ಈಗಾಗಲೇ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಾನೆ ಗುರೂಜಿ ಪಟ್ಟಣದಲ್ಲಿ ಒಂದು ಚಿನ್ನಾಭರಣದ ಅಂಗಡಿ ಕೂಡ ತೆರೆದಿದ್ದಾರೆ.
ಇದೇ ರೀತಿ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವಾಸವಿರುವ ತನ್ನ ಊರಿನಲ್ಲೇ ಮತ್ತೊಂದು ಚಿನ್ನಾಭರಣ ಅಂಗಡಿ ತೆರೆಯುವ ಉದ್ದೇಶವನ್ನು ನಬೀಲ್ಕೆ ಹೊಂದಿದ್ದರು. ಕೊಲ್ಲಾಪುರ ಜಿಲ್ಲೆಯ ಸಾನೆ ಗುರೂಜಿ ಪಟ್ಟಣದಲ್ಲಿರುವ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಸುಮಾರು 95 ಲಕ್ಷ ಹಣವನ್ನು ಶೇಖರಿಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀಲೇಶ್ ಹಾಗೂ ಅಭಿಜಿತ್ ಈ ಹಣದೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಕಳುಹಿಸಿದ್ದರು. 95 ಲಕ್ಷ ರೂ.ದೊಂದಿಗೆ ನೀಲೇಶ್ ಹಾಗೂ ಅಭಿಜಿತ್ ಇಬ್ಬರು ಕಾರಿನಲ್ಲಿ ಪ್ರಯಾಣ ಬೆಳೆಸಿದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೀರೂರು ರಾಜ್ಯ ಹೆದ್ದಾರಿಯಲ್ಲಿನ ಬುಕ್ಕಾಂಬುದಿ ಕೆರೆ ಬಳಿ ತೆರಳುತ್ತಿದ್ದರು. ಅವರ ಬಳಿ ಹಣವಿದೆ ಎಂದು ಗೊತ್ತಾಗಿ 10ಕ್ಕೂ ಹೆಚ್ವು ದರೋಡೆಕೋರರ ಗ್ಯಾಂಗ್ ಆ ಕಾರ್ ಅಡ್ಡಗಟ್ಟಿ ಚಾಕು, ಪಿಸ್ತೂಲ್ ತೋರಿಸಿ 95 ಲಕ್ಷ ಹಣ ದರೋಡೆ ಮಾಡಿದ್ದಾರೆಂದು ಎಸ್ಪಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದರು.
ಪ್ರಕರಣದ ಸಂಬಂಧ ಮಾತನಾಡಿದ ಎಸ್ಪಿ ಅರುಣ್ ಕುಮಾರ್, ''ಘಟನೆ ಜೂನ್ 18 ರಂದು ನಡೆದಿದ್ದು, ಈಗಾಗಲೇ ಪ್ರಕರಣ ದಾಖಲಾಗಿದೆ. ಕೊಲ್ಲಾಪುರ ಜಿಲ್ಲೆಯಲ್ಲಿ ಬಂಗಾರ ಮಾರಾಟ ಮಾಡಿ ಕೇರಳಕ್ಕೆ ತೆರಳುತ್ತಿದ್ದವರ ಕಾರ್ನ್ನು 10ಕ್ಕೂ ಹೆಚ್ಚು ದರೋಡೆಕೋರರು ಅಡ್ಡಗಟ್ಟಿ 95 ಲಕ್ಷ ರೂ. ದೋಚಿದ್ದಾರೆ. ಹಣದೊಂದಿಗೆ ಇದ್ದ ಒಬ್ಬರನ್ನು ಚಳ್ಳಕೆರೆ ಹಾಗೂ ಮತ್ತೋರ್ವನನ್ನು ಬೆಂಗಳೂರು ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪ್ರಕರಣವನ್ನು ದಾಖಲು ಮಾಡಲಾಗಿದೆ. ಈ ಪ್ರಕರಣದ ತನಿಖೆ ಮಾಡಿದಾಗ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೋಲಿಸ್ ಠಾಣೆಯ ಸರಹದ್ದಿನಲ್ಲಿ. ಈ ಪ್ರಕರಣವನ್ನು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣವನ್ನು ವರ್ಗಾವಣೆ ಮಾಡ್ತೇವೆ'' ಎಂದರು.
ವಿಷಯ ತಿಳಿದ ಹಣದ ಮಾಲೀಕ ತೈಲ ವ್ಯಾಪಾರಿ ನಬೀಲ್ಕೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಜೂನ್ 18ರಂದು ಪ್ರಕರಣ ದಾಖಲಿಸಿದ್ದಾರೆ. ಬುಕ್ಕಾಂಬೂದಿ ಕೆರೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಗೆ ಒಳಪಡುವುದರಿಂದ ಪ್ರಕರಣವನ್ನು ಚನ್ನಗಿರಿ ಪೊಲೀಸರು ಅಜ್ಜಂಪುರ ಠಾಣೆಗೆ ವರ್ಗಾಯಿಸುತ್ತೇವೆಂದು ದಾವಣಗೆರೆ ಎಸ್ಪಿ ಮಾಹಿತಿ ನೀಡಿದರು. ಪೊಲೀಸರ ಸಂಪೂರ್ಣ ತನಿಖೆ ನಿಜಾಂಶ ಹೊರಬರಲಿದೆ.
ಇದನ್ನೂ ಓದಿ: ಬರೋಬ್ಬರಿ 44 ದ್ವಿಚಕ್ರ ವಾಹನಗಳನ್ನು ಕದ್ದು ಪೊಲೀಸರ ಅತಿಥಿಗಳಾದ ಅಪ್ರಾಪ್ತರು