ದಾವಣಗೆರೆ: ಯಾವುದೇ ಚರ್ಚೆ ಮಾಡದೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಇಡೀ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮತದಿಂದ ಗೆದ್ದುಕೊಂಡು ಕಾಯ್ದೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಇದರ ಬಗ್ಗೆ ಜೆಡಿಎಸ್ನವರಿಗೂ ಮಾತನಾಡುವುದಕ್ಕೆ ಅವಕಾಶ ಸಿಕ್ಕಿಲ್ಲ. ಸ್ಪೀಕರ್ ಸ್ಥಾನ ದುರುಪಯೋಗ ಮಾಡಿಕೊಂಡು ಧ್ವನಿ ಮತದ ಮೂಲಕ ಕಾಯ್ದೆ ಮಾಡಿದ್ದೇವೆ ಎಂದಿದ್ದಾರೆ. ಮಾತನಾಡೋಕೆ ಅವಕಾಶ ಕೊಡದೆ ಏಕಾಏಕಿ ದುರುಪಯೋಗ ನಡೆದಿದೆ. ಕಾಯ್ದೆ ಧಿಕ್ಕರಿಸಿ ಪ್ರತಿಭಟಿಸುತ್ತೇವೆ, ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೇ ಎಂದು ಸರ್ವಾಧಿಕಾರಿತನ ಮೆರೆಯುತ್ತಿದ್ದಾರೆ. ಸೂರ್ಯ ಮೇಲಿನಿಂದ ಕೆಳಗೆ ಇಳಿಯಲೇಬೇಕು. ಸರ್ವಾಧಿಕಾರಿತನ ಜಾಸ್ತಿ ದಿನ ನಡೆಯಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮೈತ್ರಿ ಸರ್ಕಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರವರ ಅನುಭವ ಹೇಳಿಕೊಂಡಿದ್ದಾರೆ. ಅವರು ಸಿಎಂ ಆಗಿಯೇ ಕೆಲಸ ಮಾಡುತ್ತಿದ್ದರು ಎಂದು ನಾನು ಭಾವಿಸಿದ್ದೆ. ಅವರು ಯಾಕೆ ಈ ಹೇಳಿಕೆ ಕೊಟ್ಟರೋ ಅವರನ್ನೇ ಕೇಳಿ ಎಂದರು.
ಬೆಳಗಾವಿ ಲೋಕಸಭೆ ಉಪಚುನಾವಣೆ ಬಗ್ಗೆ ಮಾತಾನಾಡಿದ ಅವರು, ಹೈಕಮಾಂಡ್ಗೆ ಮೂವರ ಹೆಸರು ಕಳುಹಿಸಿದ್ದು, ಪರಿಶೀಲನೆ ನಡೆಯುತ್ತಿದೆ. ಕಾರ್ಯಕರ್ತರು ಹೇಳಿದ ಹೆಸರೇ ಫೈನಲ್ ಮಾಡಲಾಗಿದೆ ಎಂದರು.