ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಬಳಿ ಇರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ. ಕಳೆದ ದಿನ 31 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಂದು ಕೂಡ ಅದೇ ಶಾಲೆಯಲ್ಲಿ ಮತ್ತೆ 11 ಮಕ್ಕಳಿಗೆ ವೈರಸ್ ದೃಢಪಟ್ಟಿದೆ.
ಇಂದು 47 ವಿದ್ಯಾರ್ಥಿಗಳಿಗೆ ಸ್ವಾಬ್ ಟೆಸ್ಟ್ ಮಾಡಿಸಿದಾಗ 11 ಮಕ್ಕಳಿಗೆ ವೈರಸ್ ದೃಢವಾಗಿದೆ. ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಒಟ್ಟು 246 ಮಕ್ಕಳಲ್ಲಿ 42 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಇನ್ನುಳಿದ 27 ಮಕ್ಕಳಿಗೂ ಕೂಡ ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ನಿನ್ನೆ 110 ಮಕ್ಕಳಿಗೆ ಸ್ವಾಬ್ ಟೆಸ್ಟ್ ಮಾಡಿದಾಗ 31 ಮಕ್ಕಳಿಗೆ ಸೋಂಕು ದೃಢವಾಗಿತ್ತು. ವಿದ್ಯಾರ್ಥಿಗಳಲ್ಲಿ ಇನ್ನೂ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶಾಲೆಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿ ಪರಿಶೀಲಿಸಿದರು. ಪೋಷಕರಿಗೆ ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ಧೈರ್ಯ ತುಂಬಿದರು.
ಜಗಳೂರಿನ ಖಾಸಗಿ ಶಾಲೆಯ ಆರು ಮಕ್ಕಳಿಗೆ ಕೊರೊನಾ ಪಾಸಿಟಿವ್
ಜಗಳೂರು ತಾಲೂಕಿನ ಎನ್ಎಂಕೆ ಹೈಸ್ಕೂಲ್ನಲ್ಲೂ ಸಹ ಆರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು 10 ದಿನಗಳ ಕಾಲ ಶಾಲೆ ಸೀಲ್ಡೌನ್ ಮಾಡಿದ್ದು, ಆರು ಮಕ್ಕಳಿಗೆ ಸೋಂಕು ಪತ್ತೆ ಹಿನ್ನೆಲೆ ಮಕ್ಕಳ ಸಂಪರ್ಕದಲ್ಲಿದ್ದ ಉಳಿದವರ ಹಾಗು ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಿಂದ ಪೋಷಕರು ಆತಂಕದಲ್ಲಿದ್ದು, ಸೋಂಕಿತ ಮಕ್ಕಳಿಗೆ ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಓದಿ: ಬೆಳಗಾವಿಯ ಹೋಲ್‌ಸೇಲ್ ತರಕಾರಿ ವ್ಯಾಪಾರಿಗಳ ಜೊತೆ ಡಿಸಿ ಸಭೆ: ರೈತ ಮುಖಂಡರ ಹೈಡ್ರಾಮಾ