ದಾವಣಗೆರೆ: ಮೂರು ಆನೆಗಳು ಸುಮಾರು 2 ತಿಂಗಳಿನಿಂದ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಆವರಣದಲ್ಲಿ ವಾಸ್ತವ್ಯ ಹೂಡಿವೆ. ಹಿರೇಕಲ್ಮಠದ ಆನೆ, ರಾಣೆಬೆನ್ನೂರು ತಾಲೂಕಿನ ಐರಣಿ ಮಠದ ಆನೆ ಹಾಗೂ ನಗರದ ವಿನೋಬನಗರದಲ್ಲಿರುವ ಮಠದ ಆನೆ 60 ದಿನಗಳಿಂದ ಇಲ್ಲಿಯೇ ಬೀಡುಬಿಟ್ಟಿವೆ.
ಕೋವಿಡ್-19 ಹಿನ್ನೆಲೆ ಹೊರ ದೇಶ, ರಾಜ್ಯಗಳಿಂದ ಬರುವವರನ್ನು 14 ದಿನಗಳ ಕ್ವಾರಂಟೈನ್‌ನಲ್ಲಿಡುವುದು ಸಾಮಾನ್ಯ. ಆದರೆ, ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ಲಾಕ್‌ಡೌನ್ ಆದಾಗಿನಿಂದ ಈ ಎರಡು ಆನೆಗಳು ಇಲ್ಲಿಯೇ ಇವೆ.
ಶ್ರೀಶೈಲ ಮಠದ ಆನೆ ಹಾಗೂ ಐರಣಿ ಮಠದ ಆನೆ ಮೂಲ ಸ್ಥಳಗಳಿಗೆ ತೆರಳಬೇಕಿತ್ತು. ಆದ್ರೆ ಲಾಕ್‌ಡೌನ್ ಇದ್ದ ಕಾರಣ ಕರೆದೊಯ್ಯಲು ಆಗಿಲ್ಲ. ಭಕ್ತರು ನೀಡುವ ಅಕ್ಕಿ, ಬೆಲ್ಲ, ಬಾಳೆಹಣ್ಣು, ಕಲ್ಲಂಗಡಿಯನ್ನು ಆನೆಗಳಿಗೆ ನೀಡಲಾಗುತ್ತಿದೆ. ಮಠದ ಆವರಣ ವಿಶಾಲವಾಗಿರುವುದರಿಂದ ಆನೆಗಳು ಹಾಯಾಗಿವೆ. ಈಗಾಗಲೇ ಐರಣಿ ಮಠದ ಆನೆ ಮೂಲ ಸ್ಥಾನಕ್ಕೆ ವಾಪಸ್ ಹೋಗಿದ್ದು, ಈಗ ಶ್ರೀಶೈಲ ಮಠದ ಆನೆ ಹಾಗೂ ಹೊನ್ನಾಳಿ ಹಿರೇಕಲ್ಮಠದ ಆನೆ ಮಾತ್ರ ಇಲ್ಲಿವೆ.
ಶ್ರೀಶೈಲ ಪೀಠದ ಆನೆ ಹೋಗಿದ್ದರೆ ಆಹಾರ ಸಿಗದೇ ಕಷ್ಟವಾಗುತ್ತಿತ್ತು. ಅರಳಿ ಮರದ ಸೊಪ್ಪು, ಹುಲ್ಲು ತರಲು ಹದಿನೈದರಿಂದ ಇಪ್ಪತ್ತು ಕಿಲೋಮಿಟರ್ ಹೋಗಬೇಕಿತ್ತು. ಆದ್ರೆ, ಮಠದಲ್ಲಿ ಇದರ ಕೊರತೆ ಇಲ್ಲ. ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನಮಗೆ ಊಟ, ತಿಂಡಿ ಹಾಗೂ ಆನೆಗಳಿಗೆ ಬೇಕಾದ ಆಹಾರ ಒದಗಿಸಿದ್ದಾರೆ ಎನ್ನುತ್ತಾರೆ ಮಾವುತರಾದ ಬಾಬುಸಾಬ್, ಮುನಾರ್ ಸಾಬ್, ಇರ್ಫಾನ್ ಸಾಬ್.