ದಾವಣಗೆರೆ: ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಹಾಗೂ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ನಗರದ ಜಯದೇವ ವೃತ್ತದಲ್ಲಿ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಹತ್ತನೇ ದಿನ ಪೂರೈಸಿದೆ.
ಕೋವಿಡ್ ಸಂಕಷ್ಟದ ವೇಳೆ ಕರ್ತವ್ಯ ನಿರ್ವಹಿಸಿರುವ ಅರೆಕಾಲಿಕ ಹಾಗೂ ಗುತ್ತಿಗೆ ನೌಕರರ ಸೇವೆಯನ್ನು ಸರ್ಕಾರ ಪರಿಗಣಿಸುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಇದರಿಂದಾಗಿ ನೌಕರರ ಬದುಕು ಬೀದಿಗೆ ಬಂದಿದೆ. ಸರ್ಕಾರ ಇದೇ ರೀತಿಯ ಧೋರಣೆ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೌಕರರು ಎಚ್ಚರಿಕೆ ನೀಡಿದರು.
ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಎನ್‍ಹೆಚ್‍ಎಂ ಆರೋಗ್ಯ ಇಲಾಖೆಯ ನೌಕರರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಸೇವೆ ಖಾಯಂ ಮಾಡುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದರು.
ಗುತ್ತಿಗೆ ನೌಕರರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ಎನ್‍ಹೆಚ್‍ಎಂ ನೌಕರರ ಹೋರಾಟಕ್ಕೆ ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡಿದೆ. ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ನೇತೃತ್ವದಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ನಿಮ್ಮ ನ್ಯಾಯಯುತ ಬೇಡಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ನಂತರ ಮಾತನಾಡಿದ ಹೆಚ್.ಬಿ. ಮಂಜಪ್ಪ, ನಿಮ್ಮ ಹೋರಾಟ ಸಂಪೂರ್ಣವಾಗಿ ನ್ಯಾಯಯುತವಾಗಿದ್ದು, ನಿಮ್ಮ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಎನ್‍ಹೆಚ್‍ಎಂ ಆರೋಗ್ಯ ಇಲಾಖೆಯ ನೌಕರರು ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಾರೆ. ಅವರನ್ನು ಸನ್ಮಾನಿಸುವುದಕ್ಕಿಂತ ಅವರಿಗೆ ಸಂಬಳ ನೀಡಿದ್ದರೆ, ಅವರ ಹೊಟ್ಟೆಯಾದರೂ ತುಂಬುತ್ತಿತ್ತು ಎಂದರು.