ದಾವಣಗೆರೆ: ಬಿಜೆಪಿಯವರದ್ದು ಲಂಚ, ಮಂಚದ ಸರ್ಕಾರ. ಒಬ್ಬ ಸಚಿವ ಲಂಚಕ್ಕೆ, ಮತ್ತೊಬ್ಬ ಮಂಚಕ್ಕೆ ಹೋದ. ಈಗ ಸಚಿವ ಸ್ಥಾನ ನೀಡಿ ಎಂದು ಅಲೆದಾಡುತ್ತಿದ್ದಾರೆ. ಇವರೆಲ್ಲ ಬಿಜೆಪಿಗೆ ಮುತ್ತು ರತ್ನಗಳಿದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.
ದಾವಣಗೆರೆಯಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಅನೇಕ ವಿಚಾರಗಳ ಬಗ್ಗೆ ಶಾಸಕರು, ಸಚಿವರು ಹೇಳಿಕೆ ಕೊಟ್ಟರೂ ಬಿಜೆಪಿ ತನಿಖೆ ಮಾಡಿಸಲಿಲ್ಲ. ಸಿಎಂ ಮತ್ತು ಡಿಜಿಯವರು ತಕ್ಷಣ ಸುಮೋಟೋ ಕೇಸ್ ದಾಖಲಿಸಿ ತನಿಖೆ ಮಾಡಿಸುವ ಕೆಲಸ ಮಾಡಲಿಲ್ಲ. ಮುಂದೊಂದಿನ ನಮ್ಮ ಸರ್ಕಾರ ಬರುತ್ತೆ. ಆಗ ಎಲ್ಲ ಹಗರಣಗಳ ತನಿಖೆ ನಡೆಯುತ್ತದೆ ಎಂದು ಎಚ್ಚರಿಕೆ ಕೊಟ್ಟರು.
40 ಪರ್ಸೆಂಟ್ ಕಮಿಷನ್ ಬಿಜೆಪಿ ಸರ್ಕಾರದ ಬ್ರ್ಯಾಂಡ್ ಆಗಿದೆ. ನಮ್ಮ ಶಾಸಕರು ಯಾವಾಗಲಾದರೂ ಲಂಚ, ಕಮಿಷನ್ ತೆಗೆದುಕೊಂಡಿದ್ದಾರಾ?, ಸಿದ್ದರಾಮಯ್ಯ ಕಾಲದಲ್ಲಿ ಮಂತ್ರಿಗಳಿಗೆ ಲಂಚ ಕೊಟ್ಟರೇ ಎಂದು ಪ್ರಶ್ನಿಸಿದರು. ಇವರ ಕಾಲದಲ್ಲಿ ಐಎಎಸ್ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ. ಈ ಬಿಜೆಪಿಯವರು ಹಾಸಿಗೆ, ಆಕ್ಸಿಜನ್, ವ್ಯಾಕ್ಸಿನ್ನಲ್ಲಿ ದುಡ್ಡು ಹೊಡೆದಿದ್ದಾರೆ. ವರ್ಗಾವಣೆ ದಂಧೆ, ಪಿಎಸ್ಐ ಹಗರಣ, ಕಮಿಷನ್ ಹಗರಣ.. ಹೀಗೆ ಇವರ ಹಗರಣಗಳು ಒಂದಾ, ಎರಡಾ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರದ ಹೆಸರಿನಲ್ಲಿ ರಾಜ್ಯಕ್ಕೆ ಒಳ್ಳೆದು ಮಾಡ್ತೀವಿ ಎಂದು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಆದರೆ, ಇವರಿಂದ ಏನೂ ಅಭಿವೃದ್ದಿ ಮಾಡಲು ಆಗ್ತಿಲ್ಲ. ಕೇಂದ್ರ,ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಅಭಿವೃದ್ಧಿ ಮಾಡ್ತೀವಿ ಅಂತ ಹೇಳಿದರು. ಆದರೆ ಏನೂ ಅಭಿವೃದ್ಧಿ ಇಲ್ಲದೇ ಜನರಿಗೆ ಮೋಸ ಮಾಡುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಸುಳ್ಳಿನ ಸರದಾರ ಮೋದಿ-ಬಿ.ಕೆ.ಹರಿಪ್ರಸಾದ್: ಹುಬ್ಬಳ್ಳಿಯಲ್ಲಿ ನಡೆದ ಯುವಜನೋತ್ಸವ ಸರ್ಕಾರಿ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾಕ್ಬೇಕಿತ್ತು. ಇದರ ಬದಲಿಗೆ ಅವರ ಪಕ್ಷದ ಧ್ವಜಗಳನ್ನು ಹಾಕಿದ್ದಾರೆ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಮೋದಿಯವರು ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಇವರ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಶೂನ್ಯ. 70 ವರ್ಷದಲ್ಲಿ ಏನೂ ಆಗಿಲ್ಲ ಎನ್ನುವವರು ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ 10 ವಿವಿಗಳಿದ್ದವು. ಅಲ್ಲಿಂದ 200 ತನಕ ವಿವಿ ಸ್ಥಾಪಿಸಿದ್ದು ಯಾವ ಸರ್ಕಾರ ಎಂದು ಕೇಳಿದರು. ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೊಬ್ಬ ವಿದೂಷಕ. ರಸ್ತೆ ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್, ಧರ್ಮದಂಗಲ್ ಬಗ್ಗೆ ಯೋಚಿಸಿ ಎಂದು ಯಾರಾದರೂ ಕಾರ್ಯಕರ್ತರಿಗೆ ಹೇಳ್ತಾರೆಯೇ. ಇನ್ನೊಬ್ಬ ಸಂಸದರು ಶಿವಮೊಗ್ಗಕ್ಕೆ ಭೇಟಿ ನೀಡಿ, ನಿಮ್ಮ ಮನೆಯಲ್ಲಿರುವ ಚಾಕು, ಚೂರಿಯನ್ನು ಸಾಣೆ ಮಾಡಿ ಹಿಡಿದಿಟ್ಟುಕೊಳ್ಳಿ ಅಂತಾರೆ. ಇವರೊಬ್ಬ ಎಂಪಿ. ಇಂತಹವರನ್ನು ಲೋಕಸಭೆಗೆ ಕಳಿಸಿರುವುದು ನಮ್ಮ ದುರಂತ ಎಂದು ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ವಾಕ್ಸಮರ ನಡೆಸಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಐದು ಕಡೆ ಬಿಜೆಪಿಯನ್ನು ಗೆಲ್ಲಿಸಿದ್ರಿ. ಎರಡು ಕಡೆ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ರಿ. ಈ ಬಾರಿ ಏನಾಗುತ್ತೊ ಅನ್ನೋ ಸಂಶಯ ಇತ್ತು. ಇಂದಿನ ಜನಸ್ತೋಮ ಕಂಡಾಗ 07 ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂಬ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ‘‘ಇಂಡಿಗೋ ವಿಮಾನದ ಎಮರ್ಜೆನ್ಸಿ ಡೋರ್ ಓಪನ್ ಮಾಡಿಲ್ಲ.. ಕ್ಷಮಾಪಣೆಯನ್ನೂ ಕೇಳಿಲ್ಲ’’: ಅಣ್ಣಾಮಲೈ ಸ್ಪಷ್ಟನೆ