ಬಿಜೆಪಿಯವರು ಜಾತಿ ಧರ್ಮ ಒಡೆದರು, ಇದೀಗ ರೈತರನ್ನೂ ಒಡೆಯುತ್ತಿದ್ದಾರೆ: ಮಧು ಬಂಗಾರಪ್ಪ - ಈಟಿವಿ ಭಾರತ ಕನ್ನಡ
ಕಾಂಗ್ರೆಸ್ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ನಮ್ಮ ಪಕ್ಷದ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬುದು ಬಿಜೆಪಿಯವರು ಹರಡಿಸುತ್ತಿರುವುದು ಹಸಿ ಸುಳ್ಳು ಎಂದು ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ದಾವಣಗೆರೆ: ಬಿಜೆಪಿಯವರು ಮೊದಲು ಜಾತಿ ಧರ್ಮ ಒಡೆದರು, ಇದೀಗ ರೈತರನ್ನು ಒಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ನಮ್ಮ ಪಕ್ಷದ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬುದು ಬಿಜೆಪಿಯವರು ಹರಡಿಸುತ್ತಿರುವುದು ಹಸಿ ಸುಳ್ಳು ಎಂದರು.
ಬಹುತೇಕ ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ವೈಎಸ್ ವಿ ದತ್ತ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ನಮ್ಮವರು ಅತ್ತ ಕಡೆ ಹೋಗುತ್ತಿದ್ದಾರೆ ಎಂದು ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ನಾನಾ ಕಾರಣಕ್ಕೆ ಓಬಿಸಿ ಮತಗಳು ಬೇರೆ ಬೇರೆ ಕಡೆ ಹಂಚಿಹೋಗಿದೆ. ಆ ಮತಗಳನ್ನು ಸಂಪೂರ್ಣವಾಗಿ ಕಾಂಗ್ರೆಸ್‌ಗೆ ತರುವುದು ನನ್ನ ಜವಾಬ್ದಾರಿ. ಒಂದು ನೂರು ಓಬಿಸಿ ಮತಗಳಲ್ಲಿ ಶೇ.75ಕ್ಕೂ ಮತಗಳು ಕಾಂಗ್ರೆಸ್ ಜೊತೆ ಇವೆ. ರಾಜ್ಯ ಮಟ್ಟದಲ್ಲಿ ಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ಕಾಂಗ್ರೆಸ್ ಓಬಿಸಿ ಸಮಾವೇಶ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರು ಬರಲಿದ್ದಾರೆ ಎಂದರು.
ಭತ್ತ ಖರೀದಿಯಲ್ಲಿ ಸರ್ಕಾರದಿಂದ ತಾರತಮ್ಯ: ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಭತ್ತ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿದೆ. ಜೊತೆಗೆ 500 ರೂ. ಸಹಾಯಧನವನ್ನು ಕೊಡಲಾಗುತ್ತಿದೆ. ಇದಕ್ಕೆ ಕಾರಣ ಆ ಜಿಲ್ಲೆಗಳಲ್ಲಿ ಬಿಜೆಪಿ ಪ್ರಭಾವ ಜಾಸ್ತಿ ಇದೆ. ಬೇರೆ ಜಿಲ್ಲೆಯಲ್ಲೂ ಭತ್ತ ಬೆಳೆಯವ ರೈತರು ಇದ್ದಾರೆ. ಆದರೂ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಲೆ ಕೆಲಸ ಮಾಡಿಲ್ಲ: ಮಧು ಬಂಗಾರಪ್ಪ