ದಾವಣಗೆರೆ : ಕಾಂಗ್ರೆಸ್ನವರು ಪರೋಕ್ಷವಾಗಿ ಉಗ್ರರಿಗೆ ರಕ್ಷಣೆ ನೀಡುತ್ತಿದ್ದಾರೆ. ಯಾವುದೇ ಭೀತಿ ಇಲ್ಲದೆ ಬೆಂಗಳೂರಿನಲ್ಲಿ ಉಗ್ರರು ಅಡಗಿದ್ದರು. ಸೆರೆ ಸಿಕ್ಕವರನ್ನು ಗಲ್ಲಿಗೇರಿಸಬೇಕೆಂದು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಬುಧವಾರ ಮಾತನಾಡಿದ ಅವರು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಜನರು ಬಯಸಿದ್ದಾರೆ. ಕಾಂಗ್ರೆಸ್ ಮುಖಂಡರು ಇನ್ನು ಮುಂದಾದರೂ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದರು.
ಮಹಾಘಟಬಂಧನ್ ವಿರುದ್ಧ ವಾಗ್ದಾಳಿ : ಇಂಡಿಯಾ ಮಹಾಘಟಬಂಧನ್ಗೆ ಮೋದಿಯಷ್ಟೇ ಟಾರ್ಗೆಟ್ ಆಗಿದ್ದಾರೆ. ಇದರಲ್ಲಿರುವ ಬಹುತೇಕ ನಾಯಕರಾದ ಸ್ಟಾಲಿನ್, ಮಮತಾ ಬ್ಯಾನರ್ಜಿ, ಕೇಜ್ರಿವಾಲ್, ಬಿಹಾರದ ನಿತೀಶ್ ಇವರೆಲ್ಲ ಪರೋಕ್ಷವಾಗಿ ಭಯೋತ್ಪಾದನೆಗೆ ಬೆಂಬಲ ನೀಡಿದವರು. ಈ ಸಭೆ ಭಯೋತ್ಪಾದಕರಿಗೆ ಟಾರ್ಗೆಟ್ ಆಗಿತ್ತು ಎನ್ನುವುದು ಸುಳ್ಳು. ತನಿಖೆಯಾಗಿ ಸತ್ಯಾಂಶ ಹೊರಬರಬೇಕು ಎಂದು ಹೇಳಿದರು.
ವಿಪಕ್ಷಗಳಿಗೆ ಯಾವುದೇ ಸಿದ್ದಾಂತಗಳಿಲ್ಲ. ರಾಷ್ಟ್ರೀಯ ಮನೋಭಾವ ಇಲ್ಲ. ಮಹಾಘಟಬಂಧನ್ ಅವರ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ಮಾಡಿದ್ದಾರೆ. ತಾಕತ್ ಇದ್ದರೆ ಮುಂದಿನ ಪ್ರಧಾನಿ ಯಾರು ಎಂದು ಹೇಳಲಿ. ಮುಂಬೈನಲ್ಲಿ ನಡೆಯುವ ಮೂರನೇ ಸಭೆ ವೇಳೆ ಮಹಾಘಟಬಂಧನ್ ಛಿದ್ರ ಛಿದ್ರವಾಗುತ್ತದೆ ಎಂದು ಟೀಕಿಸಿದರು.
ಎನ್ಡಿಎಗೆ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ನನಗೆ ಯಾವುದೇ ಪಕ್ಷಗಳಿಂದ ಆಹ್ವಾನ ಬಂದಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೋ ಗೊತ್ತಿಲ್ಲ ಎಂದರು.
ಕುಮಾರಸ್ವಾಮಿ ವಿಪಕ್ಷ ನಾಯಕನಾಗುವ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯಲ್ಲಿ ಸಮರ್ಥ ನಾಯಕರು ಇದ್ದಾರೆ ಎಂದಿದ್ದಾರೆ. ಆದಷ್ಟು ಆಯ್ಕೆ ನಡೆಯುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಗೃಹಲಕ್ಷ್ಮಿ ನೋಂದಣಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಆಗಸ್ಟ್ 16ರಿಂದ ಯಜಮಾನಿಯ ಖಾತೆಗೆ ₹2,000 ಜಮೆ