ದಾವಣಗೆರೆ: ಯಾವ ಹೈಕಮಾಂಡ್? ಯಾವುದೇ ಹೈಕಮಾಂಡ್ ಕೂಡಾ ನನ್ನೊಂದಿಗೆ ಮಾತನಾಡಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಹೈಕಮಾಂಡ್ ನಿಮ್ಮನ್ನು ಸಂಪರ್ಕ ಮಾಡಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಬಾಂಬ್ ಹಾಕಿಲ್ಲ ಎಂದರು. ಇದೇ ವೇಳೆ, ಲಿಂಗಾಯತ ಶಕ್ತಿ ಸಂಘಟನೆ ಇದೆ. ವೀರಶೈವ ಲಿಂಗಾಯತ ಮಹಾ ಅಧಿವೇಶನ ಲಿಂಗಾಯತ ಶಕ್ತಿ ಪ್ರದರ್ಶನವಲ್ಲ ಎಂದು ತಿಳಿಸಿದರು. ಸಿಎಂ ಜೊತೆ ನಿಮ್ಮ ಸಭೆ ಇದೆಯೇ ಎಂಬ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯನವರನ್ನು ಕೇಳಿ ಎಂದು ಗರಂ ಆದರು.
ಸಿಎಂ ಜೊತೆ ಮಾತನಾಡಿರುವುದನ್ನು ಹೇಳಲಾಗದು. ಅದು ಸಿಕ್ರೇಟ್ ಎಂದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪುತ್ರ ಮಲ್ಲಿಕಾರ್ಜುನ, ನಮ್ಮ ತಂದೆ ಸಿಎಂ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದ್ದು, ಅವರನ್ನೇ ಕೇಳಿ ಎಂದು ಮಾಧ್ಯಮದವರಿಗೆ ತಿಳಿಸಿದರು.
ಸಮುದಾಯದ ಅಧಿಕಾರಿಗಳ ಪಟ್ಟಿ ಬಿಡುಗಡೆ ಬಗ್ಗೆ ಹೆಚ್ಚೆಚ್ಚು ಪ್ರಶ್ನೆ ಕೇಳಬೇಡಿ ಎಂದು ತಿಳಿಸಿದರು. ಜಾತಿ ಸಮೀಕ್ಷೆ ಬಗ್ಗೆ ಕೇಳಿದ್ದಕ್ಕೆ, ಯಾವ ಜಾತಿ ಸಮೀಕ್ಷೆಯೂ ಇಲ್ಲ ಎಂದು ಉತ್ತರಿಸಿದರು. ಡಿಸೆಂಬರ್ 23 ಮತ್ತು 24 ರಂದು ವೀರಶೈವ ಲಿಂಗಾಯತ ಮಹಾ ಅಧಿವೇಶನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಲಿಂಗಾಯತ ಮಹಾ ಅಧಿವೇಶನ: ಡಿ. 23, 24ರಂದು ದಾವಣಗೆರೆಯಲ್ಲಿ ಲಿಂಗಾಯತ ಮಹಾ ಅಧಿವೇಶನ ಆಯೋಜಿಸಲಾಗುವುದು. ಲಕ್ಷಾಂತರ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಈ ವೇಳೆ ಭಾಗಿಯಾಗಲಿದ್ದಾರೆ. ಸಮುದಾಯದ ಶ್ರಯೋಭಿವೃದ್ಧಿಗಾಗಿ ಅಧಿವೇಶನ ನಡೆಯಲಿದೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯಲಿವೆ. 10 ರಿಂದ 20 ಲಕ್ಷ ಜನ ಸೇರಿದ್ರೆ ಶಕ್ತಿ ಪ್ರದರ್ಶನ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಮನೂರು ಶಿವಶಂಕರಪ್ಪ ಹೇಳಿಕೆ ವಿವಾದ: ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ತಪ್ಪು. ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಇತ್ತೀಚೆಗೆ ತಿಳಿಸಿದ್ದರು. ಮಾಹಿತಿ ಕೊರತೆಯಿಂದ ಈ ರೀತಿ ಹೇಳಿಕೆ ನೀಡಿರಬಹುದು. ಲಿಂಗಾಯತ ಅಧಿಕಾರಿಗಳಿಗೆ ಮಹತ್ವವಿಲ್ಲ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಜಾತಿ ಆಧಾರದ ಮೇಲೆ ಹುದ್ದೆ ಕೊಡಲಾಗುವುದಿಲ್ಲ. ಎಲ್ಲಾ ಜಾತಿಯಲ್ಲೂ ಅರ್ಹರು ಮತ್ತು ಅನರ್ಹರು ಇರುತ್ತಾರೆ. ಅರ್ಹತೆ ಆಧಾರದ ಮೇಲೆ ಹುದ್ದೆಗಳನ್ನು ನೀಡಲಾಗುತ್ತದೆ ಎಂದಿದ್ದರು.
ಇದನ್ನೂ ಓದಿ: ಒಂದೆಡೆ ಮೈತ್ರಿಗೆ ವಿರೋಧ, ಮತ್ತೊಂದೆಡೆ ಪಕ್ಷದ ಪುನಶ್ಚೇತನಕ್ಕೆ ಜೆಡಿಎಸ್ ಸಿದ್ಧತೆ