ದಾವಣಗೆರೆ: ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರದ ವಿಚಾರವಾಗಿ ಹಾಲಿ ಶಾಸಕ ತಾರತಮ್ಯ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಡಿಜಿ ಶಾಂತನಗೌಡ ನಡುವೆ ತಹಶೀಲ್ದಾರ್ ಕಚೇರಿಯಲ್ಲಿ ವಾಗ್ವಾದ ನಡೆದಿದೆ.
ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಶಾಸಕ ರೇಣುಕಾಚಾರ್ಯ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಪರಿಹಾರದ ಹಣವನ್ನು ಮಂಜೂರು ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ನಡುವೆ ಮಾತಿನ ಚಕಮಕಿ ನಡೆದಿದೆ.
ಫಲಾನುಭವಿಗಳಿಗೆ ಹಾನಿ ಅಂದಾಜು ಮಾಡುವಾಗ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಎಂದು ಪರಿಗಣನೆ ಮಾಡುತ್ತಿರುವುದ್ದರಿಂದ ಆಕ್ರೋಶಗೊಂಡ ಮಾಜಿ ಕೈ ಶಾಸಕ ಡಿಜಿ ಶಾಂತನಗೌಡ ನ್ಯಾಯ ಒದಗಿಸುವಂತೆ ತಹಶಿಲ್ದಾರ್ ಕಚೇರಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಶಾಂತನ ಗೌಡ ಆಕ್ರೋಶ ಹೊರಹಾಕಿದ್ರು.
ನೀನು ದೊಡ್ಡ ಕಳ್ಳ ಎಂದು ರೇಣುಕಾಚಾರ್ಯಗೆ ನಿಂದಿಸಿದ ಫಲಾನುಭವಿ: ಇದೇ ವೇಳೆ ಧ್ವನಿಗೂಡಿಸಿದ ಫಲಾನುಭವಿಗಳಲ್ಲೊಬ್ಬ ನೀನೊಬ್ಬ ಕಳ್ಳ ನಿಮ್ಮವರಿಗೆ ಮಾತ್ರ ಮಳೆ ಹಾನಿ ಅನುದಾನ ಕೊಟ್ಟಿದ್ದೀಯಾ ಎಂದು ಶಾಸಕ ರೇಣುಕಾಚಾರ್ಯಗೆ ಏಕವಚನದಲ್ಲೇ ಟೀಕಿಸಿದರು. ಇನ್ನು ಶಾಸಕ ರೇಣುಕಾಚಾರ್ಯ ಮಾತನಾಡಿ, ಮಾಜಿ ಶಾಸಕರು ವಿನಾ ಕಾರಣ ಆಧಾರ ರಹಿತ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ, ತಹಶೀಲ್ದಾರ್ ಕಚೇರಿಯಲ್ಲಿ ಮಹಿಳಾ ತಹಶೀಲ್ದಾರ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಯಾಗಿ ಶಾಂತನಗೌಡ, ಶಾಸಕರು 50 ಸಾವಿರ ಲಂಚ ಪಡೆದು ಜೆಸಿಬಿ ಬಳಸಿ ಮನೆ ಕೆಡವುತ್ತಿದ್ದಾರೆ, ಅಷ್ಟೇ ಅಲ್ಲದೆ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಪರಿಹಾರ ಕೊಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಆ ರೀತಿ ಮಾಡಿದ್ದರೇ ಅದನ್ನು ಮಾಜಿ ಶಾಸಕರು ಬಹಿರಂಗಪಡಿಸಬೇಕು ಎಂದು ರೇಣುಕಾಚಾರ್ಯ ಸವಾಲು ಕೂಡಾ ಹಾಕಿದರು.
ಇದನ್ನೂ ಓದಿ: ಬಿಇಎಂಎಲ್‍ನ 971 ಎಕರೆ ಜಮೀನು ಅಭಿವೃದ್ಧಿಪಡಿಸಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ: ಸಿಎಂ