ದಾವಣಗೆರೆ: 8 ವಿಧಾನಸಭಾ ಕ್ಷೇತ್ರಗಳಿರುವ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 16,11,045 ಮತದಾರರು ಇದ್ದಾರೆ. ಇಷ್ಟು ದಿನ ಶಾಮನೂರು ಹಾಗೂ ಸಿದ್ದೇಶ್ವರ್ ಕುಟುಂಬದ ಮಧ್ಯೆ ಇದ್ದ ಲೋಕ ಸಮರ ಈಗ ಬದಲಾಗಿದೆ. ಅಹಿಂದ ವರ್ಗದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಅಖಾಡಕ್ಕೆ ಇಳಿದಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಜಿ.ಎಂ.ಸಿದ್ದೇಶ್ವರ್ಗೆ ಸೋಲಿನ ರುಚಿ ಉಣಿಸಲಿದ್ದಾರೆಯೇ ಕಾದು ನೋಡಬೇಕಿದೆ.
ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅಭ್ಯರ್ಥಿ ಘೋಷಣೆ ಮಾಡಿದ್ದ ಕಾಂಗ್ರೆಸ್, ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪರನ್ನು ಕಣಕ್ಕೆ ಇಳಿಸಿತ್ತು. ಹಿಂದೆ ಮೂರು ಬಾರಿ ಎದುರಾಳಿಗಳಾಗಿದ್ದ ಜಿ.ಎಂ.ಸಿದ್ದೇಶ್ವರ್ ಮತ್ತು ಮಲ್ಲಿಕಾರ್ಜುನ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಕಡಿಮೆ ಅಂತರದಲ್ಲಿ ಮೂರು ಬಾರಿ ಮಲ್ಲಿಕಾರ್ಜುನ್ ಪರಾಭವಗೊಂಡಿದ್ದರು.
ಬಳಿಕ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು. ಈ ಬೇಜಾರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ಮಲ್ಲಿಕಾರ್ಜುನ್ ತೀರ್ಮಾನ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಶಾಸನೂರು ಶಿವಶಂಕರಪ್ಪರಿಗೆ ಟಿಕೆಟ್ ನೀಡುವ ಮೂಲಕ ಹೈಕಮಾಂಡ್ ಅಚ್ಚರಿ ಆಯ್ಕೆ ಮಾಡಿತ್ತು. ಬಳಿಕ ನಿರಾಸಕ್ತಿ ತೋರಿದ ಶಾಮನೂರು, ತಮ್ಮ ಆಪ್ತ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಅಹಿಂದ ಕ್ಷೇತ್ರ ದಾವಣಗೆರೆ:
ಒಂದು ರೀತಿಯಲ್ಲಿ ದಾವಣಗೆರೆ ಅಹಿಂದ ಕ್ಷೇತ್ರವಾಗಿದೆ. 16 ಲಕ್ಷ ಮತದಾರರಿರುವ ಇಲ್ಲಿ ಸುಮಾರು 4.3 ಲಕ್ಷಕ್ಕೂ ಹೆಚ್ಚು ಲಿಂಗಾಯತರಿದ್ದು, ಉಳಿದ ಸುಮಾರು 11 ಲಕ್ಷ ಅಹಿಂದ ಮತಗಳು ಇವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ದಾವಣಗೆರೆಗೆ ಅಹಿಂದ ಅಭ್ಯರ್ಥಿ ಹಾಕುವ ಮೂಲಕ ಕಾಂಗ್ರೆಸ್ ರಣತಂತ್ರ ರೂಪಿಸಿದೆ ಎನ್ನಲಾಗಿದೆ.
ಕುರುಬ ಸಮುದಾಯದ ಹೆಚ್.ಬಿ.ಮಂಜಪ್ಪ ಗ್ರಾಮ ಪಂಚಾಯಿತಿಯಿಂದ ಇಲ್ಲಿಯವರೆಗೂ ಯಾವುದೇ ಚುನಾವಣೆಯಲ್ಲೂ ಸೋಲು ಕಂಡಿಲ್ಲ. ಹೀಗಾಗಿ ಸೋಲಿಲ್ಲದ ಸರದಾರ ಮಂಜಪ್ಪ, ಹ್ಯಾಟ್ರಿಕ್ ಸಂಸದ ಜಿ.ಎಂ.ಸಿದ್ದೇಶ್ವರ್ಗೆ ಸೋಲಿನ ರುಚಿ ತೋರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ನಂಬಿಕೊಂಡಿದ್ದಾರೆ.
ಬಿರುಸಿನ ಪ್ರಚಾರ ಕೈಗೊಂಡ ಕೈ ಅಭ್ಯರ್ಥಿ:
ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಕಾರಣ ಮಂಜಪ್ಪ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜಗಳೂರು ತಾಲೂಕಿನಲ್ಲಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ನೇತೃತ್ವದಲ್ಲಿ ಬಿದರಕೆರೆ, ಬಿಸ್ತುವಳ್ಳಿ, ತೋರಣಗಟ್ಟೆ, ಕಲ್ಲೇ ದೇವರಪುರ, ದೊಣ್ಣೆಹಳ್ಳಿ, ಮುಸ್ಟೂರು, ಹಿರೇಮಲ್ಲನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.
ಹಣ ಹೊಂದಿಸಿಕೊಟ್ಟ ಚಿಕ್ಕ ಉಜಿನಿ ಗ್ರಾಮಸ್ಥರು:
ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಬಿರುಸಿನ ಪ್ರಚಾರ ಕೈಗೊಂಡಿದ್ದು, ಜಗಳೂರು ತಾಲೂಕಿನ ಚಿಕ್ಕ ಉಜಿನಿ ಗ್ರಾಮಸ್ಥರು ಚುನಾವಣಾ ಖರ್ಚಿಗೆ 10 ಸಾವಿರ ರೂ. ಹೊಂದಿಸಿ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅಭ್ಯರ್ಥಿ ಮಂಜಪ್ಪ, ಈ ಚುನಾವಣೆ ಹಣಬಲ, ಜನಬಲದ ವಿರುದ್ಧವಾಗಿದೆ. ಹಣ ಬಲ ಹೊಂದಿರುವ ಜಿ.ಎಂ.ಸಿದ್ದೇಶ್ವರ್ ಮೂರು ಬಾರಿ ಗೆದ್ದಿದ್ದರು ಸಹ ಒಂದು ಅಭಿವೃದ್ದಿ ಕೆಲಸ ಮಾಡಲಿಲ್ಲ. ಹಣಬಲದಲ್ಲಿ ಚುನಾವಣೆ ಗೆಲ್ಲುತ್ತೇನೆ ಎಂಬ ಭ್ರಮೆ ಇಟ್ಟುಕೊಂಡಿದ್ದಾರೆ. ಈ ಬಾರಿ ಜನ ನಿರ್ಧರಿಸುತ್ತಾರೆ. ಜನಬಲಕ್ಕೆ ಜಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮಾಜಿ ಶಾಸಕ ಹೆಚ್.ಬಿ.ರಾಜೇಶ್ ಮಾತನಾಡಿ, ಪ್ರಧಾನಿ ಮೋದಿಯವರು ಹೇಗೆ ಸುಳ್ಳು ಹೇಳಿ ಜನರನ್ನು ಯಾಮಾರಿಸುತ್ತಾರೋ ಅದೇ ರೀತಿ ಇಲ್ಲಿನ ಸಂಸದರು ಮೂರು ಬಾರಿ ಗೆದ್ದು ಸುಳ್ಳುಗಳನ್ನು ಕರಗತ ಮಾಡಿಕೊಂಡಿದ್ದಾರೆ. ನಮ್ಮ ಅಭ್ಯರ್ಥಿ ಮಂಜಪ್ಪ ಈ ಬಾರಿ ಗೆಲುವು ಸಾಧಿಸುವುದರಲ್ಲಿ ಸಂದೇಹ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಾರೆ ದಾವಣಗೆರೆಯಲ್ಲಿ ಚುನಾವಣಾ ಕಣ ರಂಗೇರಿದ್ದು, ಹಾಲಿ ಸಂಸದ ಸಿದ್ದೇಶ್ವರ್ ಅವರು ಕೂಡ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ರೋಚಕ ಹಣಾಹಣಿ ನಿರೀಕ್ಷೆ ಮಾಡಲಾಗಿದೆ.