ದಾವಣಗೆರೆ: ನಗರದ ಎಸ್.ಎಸ್.ಕಲ್ಯಾಣ ಮಂಟಪದಲ್ಲಿ ನಡೆದ, ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕೆಲಕಾಲ ಗೊಂದಲ, ಗದ್ದಲದ ವಾತಾವರಣ ಸೃಷ್ಟಿಯಾಯಿತು. ಬಿಜೆಪಿ ಶಾಸಕ ಹಾಗೂ ಸಿದ್ಧರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಜಟಾಪಟಿ ನಡೆಯಿತು.
ಸಮಾರಂಭದಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, "ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ, ಮೋದಿಯವರನ್ನು ಕೇಳಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರಾ?'' ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಭಾಷಣಕ್ಕೆ ಅಡ್ಡಿಪಡಿಸಿದರು.
ಚುನಾವಣಾ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಂತೆ, ದೇಶದ ಎಲ್ಲ ಪಕ್ಷಗಳು ಚುನಾವಣೆಯ ವೇಳೆ ಇದೇ ರೀತಿ ಆಮಿಷವೊಡ್ಡಿ, ಅಧಿಕಾರಕ್ಕೆ ಬಂದು ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ, ದೇಶದ ಅಭಿವೃದ್ಧಿ ಏನಾಗಲಿದೆ ಎಂಬುದನ್ನು ಕೂಡ ನಾವು ಚಿಂತಿಸಬೇಕು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ನೀವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಭರವಸೆ ಈಡೇರಿಸಿದ್ದೀರಾ?. ದೇಶದ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಮೋದಿಯವರು ಆಡಳಿತ ನಡೆಸಿ 9 ವರ್ಷ ಆಗಿದೆ. ಇನ್ನೂ ಜನರ ಖಾತೆಗೆ ಹಣ ಬಂದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ನೀಡಿದ ಐದು ಭರವಸೆ ಈಡೇರಿಸಿದೆ. ನೀವು ಗ್ಯಾರಂಟಿ ಬಗ್ಗೆ ಮಾತನಾಡುತ್ತೀರಾ ಎಂದು ಕಾರ್ಯಕರ್ತರು ಪ್ರಶ್ನಿಸಿದರು. ಈ ವೇಳೆ ಶಾಸಕರು ಹಾಗು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಧ್ಯಪ್ರವೇಶ: ಜಿಲ್ಲಾ ಉಸ್ತುವಾರಿ ಎಸ್.ಎಸ್.ಮಲ್ಲಿಕಾರ್ಜುನ್ ಮಧ್ಯಪ್ರವೇಶಿಸಿ, ಸಭಿಕರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಬಿ.ಪಿ.ಹರೀಶ್, "ನಾನು ಎಂಟು ಸಲ ವಿಧಾನಸಭೆಗೆ ಸ್ಪರ್ಧಿಸಿದ್ದೇನೆ" ಎಂದು ವೇದಿಕೆ ಮೇಲೆ ಅಬ್ಬರಿಸಿದರು. ಇದು ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತು.
ಪೊಲೀಸರು ಮಧ್ಯಪ್ರವೇಶ ಮಾಡಿ, ಶಾಸಕರ ಭಾಷಣಕ್ಕೆ ತೊಂದರೆ ಕೊಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕಾರ್ಯಕ್ರಮದಿಂದ ಹೊರಕಳುಹಿಸಿದರು. ಹರಿಹರದ ಮಾಜಿ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಕೂಡ ಸಭಿಕರನ್ನು ಸಮಾಧಾನಮಾಡುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: Annabhagya: ಅನ್ನಭಾಗ್ಯದಡಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಸೆಪ್ಟೆಂಬರ್‌ನಿಂದ್ಲೇ ವಿತರಿಸಲು ಕ್ರಮ: ಸಚಿವ ಕೆ.ಹೆಚ್.ಮುನಿಯಪ್ಪ